ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಮಸ್ತ ಛಾಯಾಗ್ರಾಹಕರು ರಾಜ್ಯದ ಹೆಮ್ಮೆಯ ಸಂಘ ಕೆ.ಎಸ್.ಪಿ.ಎ ನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ತಮ್ಮ ವೃತ್ತಿ ಚತುರತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಎಂದು ಕೆ.ಎಸ್.ಪಿ.ಎ ರಾಜ್ಯ ಸಂಘದ ದೊಡ್ಡಬಳ್ಳಾಪುರ ನಾಗೇಶ್ ತಿಳಿಸಿದರು
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಶನಿವಾರ ಕೆ.ಎಸ್.ಪಿ.ಎ ಪ್ರಚಾರ ಅಭಿಯಾನವನ್ನು ಆರಂಭಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಛಾಯಾಚಿತ್ರ ಕಲಾವಿದರ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ “ಡಿಜಿಟಲ್ ಇಮೇಜಿಂಗ್ ಎಕ್ಸ್ ಪೋ – 2023” ದಿನಾಂಕ 15, 16, 17 ನೇ ಜುಲೈ ರಂದು ಬೆಂಗಳೂರಿನ ಅರಮನೆ ಮೈದಾನದ ಪ್ರಿನ್ಸಸ್ ಶ್ರೈನ್ ಗೇಟ್ ನಂ 9 ನಲ್ಲಿ ಆಯೋಜಿಸಲಾಗಿದೆ.
ಈ ವಸ್ತು ಪ್ರದರ್ಶನ ನಾಡಿನ ಛಾಯಾಗ್ರಾಹಕರ ಹೆಮ್ಮೆಯ ಸಂಕೇತವಾಗಿದ್ದು, ಈ ಪ್ರದರ್ಶನದಿಂದ ಸಮಸ್ತ ಛಾಯಾಗ್ರಾಹಕರ ಹಿತ ಚಿಂತನೆಗಳಿಗೆ ನೆರವಾಗಲಿದೆ. ಈ ಪ್ರದರ್ಶನ ಕೇವಲ ವಸ್ತು ಪ್ರದರ್ಶನ ಮಾತ್ರವಲ್ಲ ರಾಜ್ಯದ ಛಾಯಾಗ್ರಾಹಕರ ಒಗ್ಗಟ್ಟಿನ ಸ್ವಾಭಿಮಾನದ ಪ್ರದರ್ಶನವಾಗಿದೆ. ಈ ವರ್ಷದ ವಸ್ತು ಪ್ರದರ್ಶನ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ದಕ್ಷಿಣ ಭಾರತದ ಅತಿ ದೊಡ್ಡ ವಸ್ತು ಪ್ರದರ್ಶನ ಇದಾಗಿದೆ. ಪ್ರಪಂಚದ ಹೆಸರಾಂತ ಕಂಪನಿಗಳು ಈ ಪ್ರದರ್ಶನದಲ್ಲಿ ನೇರವಾಗಿ ನಿಮ್ಮನ್ನು ಬೇಟಿ ಮಾಡಲಿದ್ದಾರೆ. ಹೆಸರಾಂತ ಛಾಯಾಗ್ರಾಹಕರಿಂದ ಉಚಿತ ಛಾಯಾಗ್ರಹಣ ತರಬೇತಿ ಶಿಬಿರಗಳು, ಛಾಯಾಗ್ರಹಣ ಉಪನ್ಯಾಸಗಳು ಹೀಗೆ ಹಲವಾರು ಉಪಯುಕ್ತ ಕಾರ್ಯಕ್ರಮಗಳು ಆಯೋಜನೆಗೊಳಿಸಲಾಗಿದೆ ಎಂದರು.
ಕೆ.ಎಸ್.ಪಿ.ಎ ನ ಸದಸ್ಯರಾದ ಕೆ ಸಂಪತ್ ಕುಮಾರ್, ಚಿಕ್ಕಬಳ್ಳಾಪುರ ಜಿ.ವಿ.ಮಂಜುನಾಥ, ವೆಂಕಟ್ ರಮಣ್, ರಮೇಶ್, ಶಿಡ್ಲಘಟ್ಟದ ರೂಪಸಿ ರಮೇಶ್, ಶ್ರೀನಿವಾಸ್, ಮಂಜು, ದೇವರಾಜ್ ಹಾಜರಿದ್ದರು.