ತಾಲ್ಲೂಕಿನ ಭಕ್ತರಹಳ್ಳಿಯ ನಾರಾಯಣಸ್ವಾಮಿ ಅವರ ಮಗಳು ಬಿ.ಎನ್.ಪುಷ್ಪ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ “ಕುಲಾಂತರಿ ರಾಗಿ ಸಸ್ಯದ ಲವಣಾಂಶ ಸಹಿಷ್ಣುತೆಗೆ ಸಂಬಂಧಿಸಿದ ವಂಶವಾಹಿಗಳ ಅಭಿವೃದ್ಧಿ ಮತ್ತು ಗುಣಲಕ್ಷಣ” ಕುರಿತಾಗಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದು ಡಾಕ್ಟರೇಟ್ ಪಡೆದಿದ್ದಾರೆ.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಶಾಲೆಯಲ್ಲಿ ಹತ್ತನೇ ತರಗತಿಯವರೆಗೂ ಓದಿದ ಬಿ.ಎನ್.ಪುಷ್ಪ, ಪಿಯುಸಿಯನ್ನು ಮಳ್ಳೂರಿನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಓದಿದ್ದರು. ಬಿ.ಎಸ್.ಸಿ (ಎ.ಜಿ) ಹಾಸನದಲ್ಲಿ ಓದಿ, ಎಂ.ಎಸ್.ಸಿ ಮತ್ತು ಪಿ.ಎಚ್.ಡಿ ಯನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಡಾ.ಎ.ಜಿ.ಶಂಕರ್ ಅವರ ಮಾರ್ಗದರ್ಶನದಲ್ಲಿ ಅವರು ಕುಲಾಂತರಿ ರಾಗಿ ಸಸ್ಯದ ಲವಣಾಂಶ ಸಹಿಷ್ಣುತೆಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿರುವರು.
“ಪ್ರಸ್ತುತ ಕೃಷಿಯಲ್ಲಿ ಲವಣಾಂಶ ಮಣ್ಣು ಹೆಚ್ಚುತ್ತಿರುವುದರಿಂದ ಒಳ್ಳೆಯ ಗುಣಮಟ್ಟದ ಬೆಳೆ ಮತ್ತು ಇಳುವರಿ ಕಡಿಮೆಯಾಗುತ್ತಿದೆ. ಬಹುವಂಶವಾಹಿ ಕುಲಾಂತರಿ ರಾಗಿ ಸಸ್ಯಗಳು ಉತ್ತಮವಾದ ಲವಣಾಂಶ ಸಹಿಷ್ಣತಾ ಗುಣವನ್ನು ಹೊಂದಿರುವುದನ್ನು ಸಂಶೋಧನೆ ಮಾಡಿ, ಅದರ ಮೂಲಕ ರೈತರಿಗೆ ಉತ್ಪಾದನೆ ಹೆಚ್ಚಾಗಲು ಅನುಕೂಲವಾಗುವ ಮಾಹಿತಿಯನ್ನು ಸಂಗ್ರಹ ಮಾಡಿದ್ದೇನೆ” ಎಂದು ಭಕ್ತರಹಳ್ಳಿಯ ಬಿ.ಎನ್.ಪುಷ್ಪ ತಿಳಿಸಿದ್ದಾರೆ.