ಪೆಂಡ್ಲಿವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಶನಿವಾರ ಹೊಸ ವರ್ಷಾಚರಣೆ ಆಚರಿಸಲಾಯಿತು. ಡಾ. ಜಿ.ಸುಧಾ ಅವರ “ಪುಟ್ಕಥೆಗಳು”, ಎಂ.ಎಸ್.ವಿಜಯಲಕ್ಷ್ಮಿ ಅವರ “ಸುವಿದನಿ”, ರಂಗಮ್ಮ ಹೊದೇಕಲ್ ಅವರ “ನೋವೂ ಒಂದು ಹೃದ್ಯ ಕಾವ್ಯ” ಎಂಬ ಕವನ ಸಂಕಲನವನ್ನು ಕೊರೊನಾ ಸಮಯದಲ್ಲಿ ಶಾಲಾ ಮಕ್ಕಳಿಗೆ ಮನೆ ಪಾಠ ಮಾಡಿದ್ದ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಪಿ.ಎಂ.ಚಂದನ ಮತ್ತು ಪಿ.ಎಂ.ನವ್ಯ ರವರು ಬಿಡುಗಡೆ ಮಾಡಿದರು.
ಓದುವ ಹವ್ಯಾಸದ ಪ್ರಾಮಖ್ಯತೆ ತಿಳಿಸಿ, ನಿತ್ಯ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕೆಂದು ಶಿಕ್ಷಕ ಚನ್ನಕೃಷ್ಣ ಹೇಳಿದರು. ಡಾ.ಸುಧಾ ಮತ್ತು ಅವರ ಪುಟ್ಕಥೆಗಳ ಬಗ್ಗೆ ಚಂದನಾ, ಎಂ.ಎಸ್.ವಿಜಯಲಕ್ಷ್ಮಿ ರವರ ಕುರಿತು ನವ್ಯ ಮತ್ತು ರಂಗಮ್ಮ ಹೊದೇಕಲ್ ಕುರಿತು ಶಿಕ್ಷಕಿ ವಿ.ಉಷಾ ಕಿರುಪರಿಚಯ ಮಾಡಿಕೊಟ್ಟರು.
ಪುಸ್ತಕ ಬಿಡುಗಡೆನಂತರ ಶಿಕ್ಷಕರು ಮಕ್ಕಳನ್ನು ಒಡೆಯನ ಕೆರೆಗೆ ಹೊರಸಂಚಾರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸುಂದರ ಪರಿಸರದಲ್ಲಿ ನಲಿದಾಡಿದ ಮಕ್ಕಳು, ಕೆಲವು ಪುಟ್ಕಥೆಗಳ ಸಂಭಾಷಣೆಗಳನ್ನು ಅಭಿನಯಿಸಿದರು. ನೋವೂ ಒಂದು ಹೃದ್ಯ ಕಾವ್ಯ ದ ಕವನಗಳನ್ನು ವಾಚಿಸಿದರು. ಹೀಗೆ ಹೊಸದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ವಿದ್ಯಾರ್ಥಿಗಳಿಗೆ ಕ್ಷೇತ್ರಶಿಕ್ಷಣಾಧಿಗಳು ನೀಡಿದ ನಿಘಂಟು ಮತ್ತು ಪ್ರಣತಿ ವೇದಿಕೆಯ ಕನ್ನಡದಾಟ ಪುಸ್ತಕಗಳನ್ನು ನೀಡಿ ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಯಿತು.