ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ವಿ ಮುನಿಯಪ್ಪ ಭರವಸೆ ನೀಡಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛ ಭಾರತ್ ಅಭಿಯಾನದಡಿ ಕ್ರೀಡಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷೇತ್ರದಲ್ಲಿರುವ ಕ್ರೀಡಾಪಟುಗಳಿಗಾಗಿ ತಮ್ಮ ಅಧಿಕಾರ ಅವಧಿಯಲ್ಲಿ ನೆಹರು ಕ್ರೀಡಾಂಗಣವನ್ನು ಅಭಿವೃದ್ದಿಗೊಳಿಸಲಾಗಿತ್ತು. ಮುಂದಿನ ದಿನಗಳಲ್ಲಿ ಕ್ರೀಡಾಂಗಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಪ್ರೇಕ್ಷಕರು ಮತ್ತು ಕ್ರೀಡಾಪಟುಗಳಿಗಾಗಿ ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯಿಂದ ಪೆವಿಲಿಯನ್ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ವಾಗ್ದಾನ ಮಾಡಿದರು.
ಕ್ರೀಡಾಂಗಣದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿ ಬಂದಿದೆ. ಈ ಸಂಬಂಧ ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರೀಡಾಪಟುಗಳಿಗೆ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಕ್ರೀಡಾಂಗಣಕ್ಕೆ ಅಗತ್ಯ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸ್ವಚ್ಛತೆ ಒಂದು ದಿನಕ್ಕೆ ಸೀಮಿತ ಬೇಡ: ಸಮಾಜದಲ್ಲಿರುವ ಪ್ರತಿಯೊಬ್ಬರು ಆರೋಗ್ಯವಾಗಿರಲು ಕ್ರೀಡೆ ಮತ್ತು ವ್ಯಾಯಾಮ ಅತ್ಯಗತ್ಯ ನಗರದ ಕ್ರೀಡಾಂಗಣದಲ್ಲಿ ವಾಯುವಿಹಾರಕ್ಕೆ ಬರುವ ನಾಗರಿಕರಿಗೆ ಕುಡಿಯುವ ನೀರು, ಶೌಚಾಲಯ ಸಹಿತ ಕ್ರೀಡಾಂಗಣದ ಸುತ್ತಮುತ್ತ ಕಾಂಪೌಂಡ್ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸ್ವಚ್ಛತಾ ಕಾರ್ಯ ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ಮನೆಯ ಅಂಗಳದಿಂದ ನಗರದ ಬೀದಿಬೀದಿಗಳು ಕೂಡ ಸ್ವಚ್ಛವಾಗಿಡಲು ನಾಗರಿಕರು ಸಹಕರಿಸಬೇಕೆಂದು ಶಾಸಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಶ್ರೀಕಾಂತ್, ಸದಸ್ಯ ಮಂಜುನಾಥ್, ನೆಹರು ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷ ಟಿ.ಟಿ.ನರಸಿಂಹಪ್ಪ, ಕಾರ್ಯದರ್ಶಿ ಜೆ.ವಿ.ಸುರೇಶ್, ಮನೋಹರ್, ಕ್ರೀಡಾಪಟು ಮೊಹಮ್ಮದ್ ಹಫೀಜ್, ಬಾಬಾಜಾನ್, ಮಹಬೂಬ್‍ಪಾಷ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀನಾಥ್, ಮಧು, ನಗರಸಭೆಯ ಮುರಳಿ, ಜಯ, ಕ್ರೀಡಾಂಗಣದ ಶ್ರೀನಿವಾಸ್, ರೂರಲ್ ಸ್ಕೇಟಿಂಟ್ ಅಕಾಡೆಮಿ ಕಾರ್ಯದರ್ಶಿ ಶಿವಪ್ಪ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi