ಪ್ರಧಾನಿ ನರೇಂದ್ರಮೋದಿ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ತಾಲ್ಲೂಕು ಬಿಜೆಪಿ ವತಿಯಿಂದ ಸೇವಾ ಸಪ್ತಾಹದಡಿ ಸಂಸದರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
ಚುನಾವಣೆ ವೇಳೆ ಮತ ಕೇಳಲು ಬರುವ ನಾಯಕರು ಬರೀ ಮತ ಕೇಳಿ ಹೋಗದೇ ಕುಡಿಯಲು ಒಂದಷ್ಟು ಮದ್ಯ ಕೊಟ್ಟು ಹೋಗುವ ಪರಿಣಾಮ ಯುವಕರನ್ನು ಕುಡುಕರನ್ನಾಗಿ ಮಾಡುವುದರಿಂದ ಹೆತ್ತ ತಂದೆ ತಾಯಿಗಳಿಗೆ ಊಟ ಹಾಕುವ ಬದಲಿಗೆ ತಾಯಿ ತಂದೆ ಕಣ್ಮುಂದೆಯೇ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಸಾಲದ್ದಕ್ಕೆ ಮನೆಯಲ್ಲಿರುವ ಹೆಣ್ಣು ಮಕ್ಕಳ ಒಡವೆ ಮತ್ತು ಸೊಸೈಟಿಯಿಂದ ತಂದ ಅಕ್ಕಿಯನ್ನು ಸಹ ಸಾರಾಯಿ ಅಂಗಡಿಗೆ ನೀಡಿ ಕುಡಿಯುವುದರಿಂದ ಮನೆಯಲ್ಲಿರುವ ಎಲ್ಲರೂ ಉಪವಾಸವಿರಬೇಕಾಗಿದೆ. ಹಾಗಾಗಿ ಗ್ರಾಮೀಣ ಪ್ರದೇಶಗಳ ಅಂಗಡಿಗಳಲ್ಲಿ ಮದ್ಯ ಮಾರುವವರು ಎಷ್ಟೇ ಪ್ರಭಾವಿಗಳಾದರೂ ಸರಿ ನಿರ್ದಾಕ್ಷಣ್ಯವಾಗಿ ಹಿಡಿದು ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶಗಳು ಅಭಿವೃದ್ದಿಯಾದಾಗ ಮಾತ್ರ ದೇಶ ಅಭಿವೃದ್ದಿಯಾಗುತ್ತದೆ ಎಂಬ ಪ್ರಧಾನಿ ನರೇಂದ್ರಮೋದಿಯವರ ಆಶಯದಂತೆ ಹಳ್ಳಿಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮದ ಯುವಕರು ಎಲ್ಲರೂ ಒಗ್ಗಟ್ಟಾಗಿ ವಾರಕ್ಕೊಮ್ಮೆ ಹಳ್ಳಿಯಲ್ಲಿ ಓಡಾಡಿ ಎಲ್ಲಂದರಲ್ಲಿ ಕಸ ಹಾಕವುದರ ಬಗ್ಗೆ ತಿಳಿ ಹೇಳಬೇಕು ಹಾಗೂ ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚ ವಾಗಿಟ್ಟುಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಈ ಹಿಂದೆ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕಡಿಮೆ ಬರುತ್ತಿತ್ತು. ಆದರೇ ನರೇಂದ್ರಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಗ್ರಾಮ ಪಂಚಾಯಿತಿಗಳಿಗೆ ಕೋಟ್ಯಾಂತರ ರೂ ಅನುದಾನ ಹರಿದು ಬರುತ್ತಿದೆ. ಸರ್ಕಾರದಿಂದ ಬರುವ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಜೊತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತೆ ಹಾಗೂ ನೀರು ಪೂರೈಸಲು ಆದ್ಯತೆ ನೀಡಬೇಕು ಎಂದರು.
ಸೇವಾ ಸಪ್ತಹಾದ ಅಂಗವಾಗಿ ಬೈಕ್ ರ‍್ಯಾಲಿ ಮೂಲಕ ತೆರಳಿದ ಸಂಸದರು ಮೊದಲಿಗೆ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರಸ್ತೆಯ ಬದಿಯಲ್ಲಿದ್ದ ಕಸವನ್ನು ಕಂಡು ಕೂಡಲೇ ಸ್ವಚ್ಚಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಂತರ ಬ್ಯಾಟರಾಯಸ್ವಾಮಿ ದೇವಾಲಯದ ಬಳಿಗೆ ತೆರಳಿ ಅಲ್ಲಿನ ಕಲ್ಯಾಣಿ ಸ್ವಚ್ಚಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದರು. ನಂತರ ತಾಲ್ಲೂಕಿನ ಚೀಮಂಗಲ ಗ್ರಾಮಕ್ಕೆ ತೆರಳಿ ಜನರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ನಗರ ಮಂಡಲ ಅದ್ಯಕ್ಷ ಎಸ್.ರಾಘವೇಂದ್ರ, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಬಿಜೆಪಿ ಹಿರಿಯ ಮುಖಂಡರಾದ ರಮೇಶ್‌ಬಾಯಿರಿ, ದಾಮೋದರ್, ಮಂಜುಳಮ್ಮ, ದೇವರಾಜ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi