Sidlaghatta : ಯುವಜನತೆ ಅನಗತ್ಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಬಾರದು. ಟೀಕೆ, ವಿಮರ್ಶೆಗಳ ಬಗ್ಗೆ ಯೋಚಿಸದೇ ಬೃಹತ್ ಕನಸುಗಳನ್ನು ನನಸು ಮಾಡುವತ್ತ ಪರಿಶ್ರಮ ಪಡಬೇಕು. ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿರುವ ಆರ್.ಜಿ.ಎಸ್ ಕಾಂಪ್ಲೆಕ್ಸ್ ಬಳಿಯ ಶ್ರೀ ನಾಗಲಮುದ್ದಮ್ಮ ದೇವಿ ದೇವಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಧನೆ ಮಾಡಲು ಶ್ರೇಷ್ಠ ಕುಟುಂಬದ ಹಿನ್ನಲೆಯೇ ಇರಬೇಕೆಂದಿಲ್ಲ. ಜೀವನದಲ್ಲಿ ಏನು ಸಾಧಿಸಬೇಕು ಎನ್ನುವ ಬಗ್ಗೆ ಯುವಪೀಳಿಗೆ ನಿರ್ಧರಿಸಿ, ಅದಕ್ಕೆ ಪೂರಕವಾಗಿ ಹಿರಿಯರ ಮಾರ್ಗದರ್ಶನ, ಕಲಿಕೆ, ಅನುಭವದ ಆಧಾರದಲ್ಲಿ ಹೆಚ್ಚು ಶ್ರಮಪಡಬೇಕು. ಸಮಯವನ್ನು ವ್ಯರ್ಥ ಮಾಡದೇ ಹಗಲಿರುಳೂ ಕಷ್ಟಪಟ್ಟರೆ ಬದುಕನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದರು.
ಶಿಡ್ಲಘಟ್ಟದಲ್ಲಿ ರೇಷ್ಮೆಬೆಳೆಗಾರರ ಹಾಗು ರೀಲರ್‌ಗಳ ಅನುಕೂಲಕ್ಕೆ ತಕ್ಕಂತೆ ರೇಷ್ಮೆಗೂಡು ಮಾರುಕಟ್ಟೆ ಉನ್ನತೀಕರಿಸಲು ಈಗಾಗಲೇ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿದೆ. ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟೆ ನಿರ್ಮಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವುದೋ ಬೆಟ್ಟಗುಡ್ಡ ಪ್ರದೇಶದಲ್ಲಿ ಜಮೀನು ನಿಗದಿ ಮಾಡಿದ್ದು ಇದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಹಾಗಾಗಿ ತಾಲ್ಲೂಕಿನ ಬೇರೆ ಕಡೆ ಸ್ಥಳ ಗುರುತಿಸಿ ಹೂವಿನಮಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾಜಸೇವಕ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಮಾತನಾಡಿ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಅಭಿವೃದ್ದಿ ಕಾಮಗಾರಿಗಳು ನಡೆಯಬೇಕಿದೆ. ಪ್ರಮುಖವಾಗಿ ಈ ಭಾಗದ ಯುವಕರಿಗೆ ಉದ್ಯೋಗಸೃಷ್ಟಿ ಹಾಗು ಮೂಲಭೂತಸೌಕರ್ಯಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.
ಕೋಚಿಮುಲ್‌ನ ಮಾಜಿ ಅಧ್ಯಕ್ಷ, ಕೆ.ಗುಡಿಯಪ್ಪ, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಶಾಸಕ ಪ್ರದೀಪ್‌ಈಶ್ವರ್ ಹಾಗು ಹೊಸಪೇಟೆಯ ರಾಮರತ್ನಮ್ಮ ಗುಡಿಯಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.
ವಾರ್ಷಿಕೋತ್ಸವದ ಪ್ರಯುಕ್ತ ನಾಗಲಮುದ್ದಮ್ಮ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆಯಿತು. ಜೂನಿಯರ್ ಘಂಟಸಾಲ ಖ್ಯಾತಿಯ ವಿಜಯಪುರ ಡಿ.ಎನ್.ಲಕ್ಷ್ಮಿಪತಿ ಸಂಗಡಿಗರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.
ಸಮಾಜಸೇವಕ ಎಚ್.ಎ.ಎಲ್ ದೇವರಾಜು, ಜ್ಞಾನಜ್ಯೋತಿ ಶಾಲೆಯ ಪ್ರಾಂಶುಪಾಲೆ ಮನುಶ್ರೀ, ತಾ.ಪಂ ಮಾಜಿ ಸದಸ್ಯೆ ಶೋಭಾ ಶಶಿಕುಮಾರ್, ಎಚ್.ಜಿ.ಶಶಿಕುಮಾರ್, ಎನ್.ರಮೇಶ್ ಹಾಜರಿದ್ದರು.