Sidlaghatta : ಕರ್ನಾಟಕ ಹಾಲು ಮಹಾಮಂಡಳಿ (KMF) ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಲ್ಲಿನ ಎಲ್ಲಾ ಗುತ್ತಿಗೆ ನೌಕರರನ್ನು, ಅವರನ್ನು ಕೆಲಸಕ್ಕೆ ತೆಗೆದುಕೊಂಡ ತಾರೀಖಿನಿಂದ ಖಾಯಂಗೊಳಿಸುವಂತೆಯೂ ಮತ್ತು 2006 ರ ನವೆಂಬರ್ 26 ರಿಂದ ಅನ್ವಯವಾಗುವಂತೆ ಇತರೆ ಖಾಯಂ ನೌಕರರಿಗೆ ನೀಡುತ್ತಿರುವ ವೇತನ ಇನ್ನಿತರ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಬೆಂಗಳೂರಿನ ಔದ್ಯಮಿಕ ನ್ಯಾಯಾಧೀಕರಣ ತೀರ್ಪು ನೀಡಿದೆ ಎಂದು ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿಯ ಎಲ್ ಕಾಳಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಹಾಲು ಮಹಾಮಂಡಳಿ, ಕೋಲಾರ, ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾಂ, ವಿಜಯಪುರ, ರಾಯಚೂರು, ಬಳ್ಳಾರಿ, ಗುಲ್ಬರ್ಗಾ ಮತ್ತು ತುಮಕೂರು ಜಿಲ್ಲಾ ಹಾಲು ಒಕ್ಕೂಟಗಳಲ್ಲಿನ ಸುಮಾರು 2000 ಮಂದಿ ಗುತ್ತಿಗೆ ನೌಕರರ ಪರವಾಗಿ ಕೆ.ಎಂ.ಎಫ್ ಎಂಪ್ಲಾಯಿಸಿ ಫೆಡರೇಷನ್ (ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ ಸಂಯೋಜಿತ ಸಂಘ) ಬೆಂಗಳೂರಿನ ಔದ್ಯಮಿಕ ನ್ಯಾಯಾಧೀಕರಣದಲ್ಲಿ 2006 ರ ನವೆಂಬರ್ 9 ರಲ್ಲಿ ವಿವಾದ ಹೂಡಿತ್ತು.
ಗುತ್ತಿಗೆ ನೌಕರರು ಮತ್ತು ಆಡಳಿತ ಮಂಡಳಿ ನಡುವೆ ಉದ್ಯೋಗದಾತ – ಉದ್ಯೋಗಿ ಸಂಬಂಧ ಇಲ್ಲ ಎಂಬ ಆಡಳಿತ ಮಂಡಳಿಗಳ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಹಾಗೆಯೇ ಈ ನೌಕರರನ್ನು ಖಾಯಂಗೊಳಿಸಿ ಇತರೆ ಖಾಯಂ ನೌಕರರಿಗೆ ನೀಡುತ್ತಿರುವ ಸವಲತ್ತುಗಳನ್ನು ನೀಡಿದಲ್ಲಿ ಒಕ್ಕೂಟಗಳು ಮತ್ತು ಡೈರಿಗಳನ್ನು ಮುಚ್ಚಬೇಕಾಗುತ್ತದೆ ಎಂಬ ವಾದವನ್ನು ಕೂಡ ಟ್ರಿಬುನಲ್ ಒಪ್ಪಿಲ್ಲ.
ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಜಿಲ್ಲಾ ಹಾಲು ಒಕ್ಕೂಟಗಳಲ್ಲಿನ ಗುತ್ತಿಗೆ ನೌಕರ ಪದ್ಧತಿಯನ್ನು ನಿಷೇಧಿಸುವಂತೆ ಉಚ್ಛ ನ್ಯಾಯಾಲಯ ಅನೇಕ ಬಾರಿ ಆದೇಶಿಸಿದ್ದರೂ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಕೆ.ಎಂ.ಎಫ್ ಕಾರ್ಮಿಕರ ಒಕ್ಕೂಟ (ಎಚ್.ಎಂ.ಕೆ.ಪಿ) ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿದ ಕೂಡಲೇ ಸರ್ಕಾರ ಗುತ್ತಿಗೆ ನೌಕರರ ಸಲಹಾ ಮಂಡಳಿ ಸಭೆ ಸೇರಿ ಗುತ್ತಿಗೆ ಪದ್ಧತಿ ನಿಷೇಧಕ್ಕೆ 2001 ರಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರನ್ವಯ ಸರ್ಕಾರ 2001 ರ ಡಿಸೆಂಬರ್ 11 ರಂದು ಸರ್ಕಾರ ಆದೇಶ ಹೊರಡಿಸಿತ್ತು.
ಕೆ.ಎಂ.ಎಫ್ ನ ಅಧ್ಯಕ್ಷರಾಗಿದ್ದ ಎಚ್.ಡಿ.ರೇವಣ್ಣ ಕರ್ನಾಟಕ ಹಾಲು ಮಹಾಮಂಡಳಿಯಲ್ಲಿ ಗುತ್ತಿಗೆ ನೌಕರ ಪದ್ಧತಿಯನ್ನು ನಿಷೇಧ ಮಾಡದಂತೆ ಇನ್ನಿಲ್ಲದ ಸತತ ಪ್ರಯತ್ನ ನಡೆಸಿದ್ದು ಮತ್ತು ಎಲ್ಲವನ್ನೂ ನ್ಯಾಯಾಲಯಗಳಲ್ಲಿ ಪ್ರಶ್ನಿಸಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರಿಂದ ಈ ತೀರ್ಪು ತಡವಾಗಲು ಕಾರಣವಾಯಿತು. ಅಲ್ಲದೇ ಮಂಡಳಿಯಲ್ಲಿ ಖಾಲಿ ಇದ್ದ ಎಲ್ಲ ಹುದ್ದೆಗಳಿಗೂ ತನಗೆ ಬೇಕಾದವರನ್ನು ಮತ್ತು ಸ್ವಜಾತಿಯವರನ್ನು ಅಕ್ರಮವಾಗಿ ನೇಮಕ ಮಾಡಿ ಗುತ್ತಿಗೆ ನೌಕರರಾಗಿ ಕಳೆದ 20-25 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗದ ನೌಕರರಿಗೆ ವಂಚನೆ ಮಾಡಿದ್ದನ್ನು ನಮ್ಮ ಫೆಡರೇಷನ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಒಕ್ಕೂಟಗಳ ಆಡಳಿತ ಮಂಡಳಿಗಳು ಮೇಲ್ಮನವಿ ಇತ್ಯಾದಿಗಳ ಗೋಜಿಗೆ ಹೋಗದೆ ತಕ್ಷಣ ಈ ನ್ಯಾಯಾಧೀಕರಣದ ತೀರ್ಪನ್ನು ಗೌರವಿಸಿ ಅಕ್ಷರಶಃ ಜಾರಿಗೊಳಿಸಬೇಕು ಮತ್ತು ಆ ಮೂಲಕ ಈ ಅವಕಾಶ ವಂಚಿತ ನೌಕರರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.