Sidlaghatta : ಈ ಕ್ಷೇತ್ರದ ಪವಿತ್ರ ಸ್ಥಳ ಹಾಗೂ ಪ್ರತಿ ಹಳ್ಳಿಯ ಪ್ರತಿ ಮನೆಯಿಂದಲೂ ಒಂದು ಹಿಡಿ ಪವಿತ್ರ ಮಣ್ಣನ್ನು ಸಂಗ್ರಹಿಸಿ ದೆಹಲಿಯಲ್ಲಿ ಯೋಧರ ಸ್ಮರಣಾರ್ಥ ನಿರ್ಮಾಣವಾಗುವ ಉದ್ಯಾನವನದಲ್ಲಿನ ಮಣ್ಣಿಗೆ ಬೆರೆಸಬೇಕಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಶಿಡ್ಲಘಟ್ಟ ನಗರದ ಮಯೂರ ವೃತ್ತದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಮ್ಮ ಮಣ್ಣು ನಮ್ಮ ದೇಶ ಅಭಿಯಾನದಡಿ ಪವಿತ್ರ ಮಣ್ಣಿನ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ದೇಶದ ಉದ್ದಗಲಕ್ಕೂ ಪ್ರತಿ ಪುಣ್ಯ ಕ್ಷೇತ್ರದಿಂದ, ಪ್ರತಿ ಮನೆಯಿಂದಲೂ ಒಂದು ಹಿಡಿಯಷ್ಟು ಪವಿತ್ರ ಮಣ್ಣನ್ನು ಕಳಶದಲ್ಲಿ ಸಂಗ್ರಹಿಸಿ ಅದನ್ನು ಜಿಲ್ಲೆ, ರಾಜ್ಯದ ಮೂಲಕ ದೆಹಲಿಗೆ ಕಳುಹಿಸಬೇಕು.
ಅಲ್ಲಿ ಯೋಧರ ಸ್ಮರಣಾರ್ಥ ನಿರ್ಮಾಣವಾಗುವ ಉದ್ಯಾನವನದಲ್ಲಿ ಹಾಕಲಾಗುವುದು, ಈ ದೇಶ ಕಟ್ಟುವ ಪುಣ್ಯ ಕಾರ್ಯದಲ್ಲಿ ಪ್ರತಿಯೊಬ್ಬ ದೇಶ ಭಕ್ತರೂ ಕೈ ಜೋಡಿಸಬೇಕೆಂದು ಕೋರಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಶಿಡ್ಲಘಟ್ಟದಲ್ಲಿ ಇಂದಿನಿಂದಲೆ ಪವಿತ್ರ ಮಣ್ಣಿನ ಸಂಗ್ರಹ ಅಭಿಯಾನ ಶುರುವಾಗಲಿದೆ. 34 ಕಳಶಗಳನ್ನು ಇಟ್ಟಿದ್ದು ಪ್ರತಿ ಪಂಚಾಯಿತಿಗೆ ಒಂದರಂತೆ ಕಳಶವನ್ನು ಕಳುಹಿಸಿ ಅದರಲ್ಲಿ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ.
ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪವಿತ್ರ ಮಣ್ಣನ್ನು ಸಂಗ್ರಹಿಸುವ ಮೂಲಕ ಮಣ್ಣು ಸಂಗ್ರಹ ಕಾರ್ಯ ಅಧಿಕೃತವಾಗಿ ಶುರುವಾಗಲಿದೆ, ಪ್ರತಿ ಪಂಚಾಯಿತಿಗೆ ಒಂದು ತಂಡ ರಚಿಸಿದ್ದು ಎಲ್ಲರೂ ಸೇರಿ ನಮ್ಮ ಮಣ್ಣು ನಮ್ಮ ದೇಶ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದರು.
ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಮುಖಂಡರಾದ ಆನಂದಗೌಡ, ಬಿ.ಸಿ.ನಂದೀಶ್, ಆಂಜನೇಯರೆಡ್ಡಿ, ರಜನೀಕಾಂತ್, ನಟರಾಜ್ ಹಾಜರಿದ್ದರು.