Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಸದಸ್ಯರಿಗೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ನಿರ್ಮೂಲನಾ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಈ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಕ್ಷಯ ರೋಗಿಗಳು ನಿರಂತರ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಶೀಘ್ರ ಬೇಗ ಗುಣಮುಖರಾಗಬಹುದು. ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ದಿನಗಳು ಸತತವಾದ ಕೆಮ್ಮು, ಜ್ವರ, ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಕಫದಲ್ಲಿ ರಕ್ತ ಬೀಳುವುದು ಇವೆಲ್ಲ ಕ್ಷಯ ರೋಗದ ಲಕ್ಷಣ ವಾಗಿರಬಹುದು. ಈ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಕ್ಷಯ ರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ರೋಗಿಗಳಿಗೆ ಚಿಕಿತ್ಸೆ ಪ್ರಾರಂಭಿಕ ಹಂತದಿಂದ ಮುಗಿಯುವ ತನಕ ಅವರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಸಹಾಯಧನ ಸಹ ಸಿಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಎ.ಉಮೇಶ್, ಎಂ.ಜೆ.ಶ್ರೀನಿವಾಸ್, ರವಿ ಪ್ರಸಾದ್, ಕಮಲಮ್ಮ ಪ್ರಭಾಕರ್, ಹಾಗೂ ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರಮೇಶ್, ತಾಲ್ಲೂಕು ಆರೋಗ್ಯ ನಿರೀಕ್ಷಕ ಅಧಿಕಾರಿ ದೇವರಾಜ್, ಪಿ.ಡಿ.ಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಎಸ್.ಟಿ.ಎಸ್ ನರಸಿಂಹಮೂರ್ತಿ, ಎಲ್.ಟಿ.ಒ ದೇವರಾಜ, ಗ್ರಾಮದ ಮುಖಂಡರಾದ ಗುಂಡಣ್ಣ, ನಟರಾಜ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.