Melur, Sidlaghatta : ಶಿಡ್ಲಘಟ್ಟ ತಾಲ್ಲೂಕು ಮೇಲೂರಿನಲ್ಲಿ ಸೋಮವಾರ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀರಾಮ ಭಜನೆ ಮಂಡಳಿಯ ಭಕ್ತ ವೃಂದದಿಂದ ಶ್ರೀ ಸೀತಾ ರಾಮ ಲಕ್ಷ್ಮಣ ಆಂಜನೇಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರ ವಾದನದೊಂದಿಗೆ ಭಜನೆ ತಂಡದವರ ಹಾಡುಗಳೊಂದಿಗೆ ದೇವರನ್ನು ಮೆರವಣಿಗೆ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಭಜನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿ ವರ್ಷ ಧನುರ್ಮಾಸದಲ್ಲಿ ಮೇಲೂರಿನ ಶ್ರೀರಾಮ ಭಕ್ತಮಂಡಳಿಯ ಸದಸ್ಯರು ಪ್ರತಿದಿನ ಮುಂಜಾನೆ 4:30 ಕ್ಕೆ ಊರಿನ ಪ್ರಮುಖ ಬೀದಿಗಳಲ್ಲಿ ಭಜನೆ ಮಾಡುತ್ತಾ ಊರಿನ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುತ್ತಾ ಭಕ್ತಿ ಪೂರ್ವಕವಾಗಿ ನಮಿಸುತ್ತ ದಿನವನ್ನು ಪ್ರಾರಂಭ ಮಾಡುವ ರೂಢಿಯನ್ನಿರಿಸಿಕೊಂಡಿರುವರು.
ಮಹಿಳೆಯರು ಮನೆಗಳ ಮುಂದೆ ಸಾರಿಸಿ, ರಂಗೋಲಿ ಹಾಕಿ, ದೇವರನ್ನು ಸ್ವಾಗತಿಸಿ ಆರತಿ ಬೆಳಗಿ ಪೂಜೆ ಮಾಡಿದರು. ಈ ಉತ್ಸವದಲ್ಲಿ ಸುತ್ತಮುತ್ತಲಿನ ಹಲವಾರು ಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು.
ಭಜನೆ ಮಂಡಳಿಯ ನಾರಾಯಣಸ್ವಾಮಿ, ಆರ್.ಕೇಶವ, ಮಂಜುನಾಥ, ನಾಗರಾಜ, ಮುಖೇಶ, ಜಯದೇವ, ಸುಧೀರ್, ಮುರಳಿ ಹಾಜರಿದ್ದರು.