
Melur, Sidlaghatta : ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ವಿದ್ಯಾಭ್ಯಾಸದಲ್ಲಿ ಕಡಿಮೆಯೇನು ಇಲ್ಲ, ಗ್ರಾಮೀಣ ಭಾಗದ ಮಕ್ಕಳು ತಮ್ಮಲ್ಲಿರುವ ಕೀಳಿರಿಮೆಯನ್ನು ಬಿಟ್ಟು ಪರೀಕ್ಷೆಗಳನ್ನು ಎದುರಿಸಬೇಕು ಎಂದು ನಿವೃತ್ತ ವಿಜ್ಞಾನ ಪ್ರಾಧ್ಯಾಪಕ ಮೈಸೂರಿನ ವೆಂಕಟರಾಮ್ (AVR) ಹೇಳಿದರು.
ತಾಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ 1972-73 ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನ ಹಾಗು ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲಿಕೆಯಲ್ಲಿ ವಿಭಿನ್ನವಾದ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಮಟ್ಟಕ್ಕೇರಬಹುದು, ತಂದೆ, ತಾಯಿ, ಗುರು, ಹಿರಿಯರೊಂದಿಗೆ, ಗೌರವದಿಂದ ನಡೆದುಕೊಳ್ಳುವ ಜತೆಗೆ ಶಿಸ್ತು ಅಳವಡಿಸಿಕೊಂಡು ಮುನ್ನಡೆದಲ್ಲಿ ಜೀವನದಲ್ಲಿ ಉನ್ನತ ಮಟ್ಟದ ಸಾದನೆ ಮಾಡಬಹುದು ಎಂದು ಹೇಳಿದರು. ವಿದ್ಯೆ ಯಾರು ಕದಿಯಲಾಗದ ಅಸ್ತ್ರ. ಪಠ್ಯ ವಿಷಯದಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವವಿದ್ದರೆ ಮಾತ್ರ ನಿಮಗೆ ಅರಿವು ಮೂಡಿ ವಿದ್ಯೆ ಕಲಿಯಲು ಪೂರಕವಾಗಿರುತ್ತದೆ, ಪಾಠ ಅರ್ಥವಾಗದಿದ್ದಲ್ಲಿ ಭಯ ಬಿಟ್ಟು ನಿಮ್ಮ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಿ, ಆ ದಿನದ ಪಾಠ ಆ ದಿನವೇ ಓದಿ, ಕಷ್ಟ ಪಟ್ಟು ಓದಿ ತಂದೆ, ತಾಯಿ, ಗುರು, ಊರಿಗೆ ಹಾಗು ಓದಿದ ಶಾಲೆಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಐವತ್ತು ವರ್ಷಗಳ ನಂತರ ವಿದ್ಯೆ ಕಲಿಸಿದ ಗುರುಗಳನ್ಮು ಸನ್ಮಾನಿಸಿ ಗೌರವಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.
ಗ್ರಾಮ ಪಂಚಾಯತಿ ಅದ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಒತ್ತು ನೀಡಿ ಶಿಸ್ತು ಸಂಯಮದಿಂದ ವಿದ್ಯಾಬ್ಯಾಸದ ಕಡೆ ಗಮನ ಹರಿಸಬೇಕೆಂದು ತಿಳಿಸಿದರು.
ಹಳೇ ವಿದ್ಯಾರ್ಥಿಗಳಾದ ವಿವೇಕಾನಂದ ಹಾಗು ವಿಶಾಲಕ್ಷ್ಮಿ, ರವರುಗಳು ಹಳೆಯ ನೆನಪುಗಳ ಅಭಿಪ್ರಾಯ ಹಂಚಿಕೊಂಡರು.
ಇದೇ ವೇಳೆ ವಿವೃತ್ತ ಪ್ರಾದ್ಯಾಪಕರುಗಳಾದ ಮೈಸೂರಿನ ವಿಜ್ಞಾನ ವಿಷಯದ ವೆಂಕಟರಾಮ್ (AVR) ಹಾಗು ಸಮಾಜ ವಿಷಯದ ಶಿವರಾಂ (CHS) ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಅಗತ್ಯ ಪರಿಕರಗಳಾದ ಗ್ರೀನ್‌ಬೋರ್ಡ್, ವೈಟ್ ಬೋರ್ಡ್, ನೋಟಿಸ್ ಬೋರ್ಡ್, ಸೇರಿದಂತೆ ಸೀಲಿಂಗ್ ಪ್ಯಾನ್ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ವಿಷಯದ ನಿವೃತ್ತ ಪ್ರಾಧ್ಯಾಪಕ ಮೇಲೂರು ಸಿ.ಎಚ್.ಶಿವರಾಂ ಭಾಗ್ಯಲಕ್ಷ್ಮಿಶಿವರಾಂ, ಜಯಲಕ್ಷ್ಮಮ್ಮ, ಮುಖ್ಯೋಪಾಧ್ಯಾಯರಾದ ಭಾಸ್ಕರ್, ಎಸ್.ಡಿ.ಎಂ.ಸಿ.ಅದ್ಯಕ್ಷ ಗಂಗಾಧರ್, ಉಪಾಧ್ಯಕ್ಷ ವೆಂಕಟರೆಡ್ಡಿ, ಸಮಾಜಸೇವಕ ಗುಂಡಪ್ಪ, ನಿವೃತ್ತ ಶಿಕ್ಷಕ ಕೃಷ್ಣಪ್ಪ, ಶಾಲೆಯ ಹಳೇ ವಿದ್ಯಾರ್ಥಿಗಳಾದ ಸಿ.ಚಂದ್ರೇಗೌಡ, ಸಿ.ಎಲ್.ನರಸಿಂಹರೆಡ್ಡಿ, ವಿವೇಕಾನಂದ, ವಿಶಾಲಕ್ಷಿ, ನಾರಾಯಣರೆಡ್ಡಿ, ಭಾಸ್ಕರ್, ಎಂ.ಬಿ.ಕೃಷ್ಣ ಸೇರಿದಂತೆ ಹಳೇ ವಿದ್ಯಾರ್ಥಿಗಳು ಹಾಜರಿದ್ದರು.