Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಮಹಿಳಾ ಸದಸ್ಯರು ಮತ್ತು ನೀರುಘಂಟಿಗರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಶುದ್ದ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಸೇರಿದಂತೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಮಹಿಳಾ ಸದಸ್ಯರು ನೀರಿನ ಶುದ್ದತೆ ಬಗ್ಗೆ ಹೆಚ್ಚು ಎಚ್ಚರವಹಿಸಬೇಕು. ನೀರು ಪೂರೈಸುವುದಕ್ಕೂ ಮೊದಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ತರಬೇತಿಯಲ್ಲಿ ತಿಳಿದುಕೊಂಡಲ್ಲಿ ಗ್ರಾಮೀಣ ಭಾಗದ ಜನತೆಗೆ ಶುದ್ದ ಕುಡಿಯುವ ನೀರು ಪೂರೈಸಲು ಸಹಕಾರಿಯಾಗುತ್ತದೆ. ಈಗಾಗಲೇ ಕೆಲ ಮನೆಗಳಿಗೆ ನೀರು ಪೂರೈಸುವ ನಳ ಅಳವಡಿಸಲಾಗಿದೆಯಾದರೂ ಇದೀಗ ಕೇಂದ್ರ ಸರ್ಕಾರದ ಯೋಜನೆಯಡಿ ಮನೆ ಮನೆಗೂ ಕುಡಿಯುವ ನೀರು ಪೂರೈಸುವ ನಳ ಅಳವಡಿಸಲಾಗುತ್ತಿದೆ ಎಂದರು.
ಜಲಜೀವನ್ ಮಿಷನ್‌ನ ಅನಿಲ್ ಮಾತನಾಡಿ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಹಾಗೂ ಜಲಗಾರರು ಮೊದಲು ನೀರನ್ನು ಯಾವ ರೀತಿ ಪರೀಕ್ಷಿಸಬೇಕೆಂದು ನಾವು ಕೊಡುವ ತರಬೇತಿಯಿಂದ ಅರಿತುಕೊಂಡು ತಾವೇ ತಮ್ಮ ತಮ್ಮ ಗ್ರಾಮಗಳ ಕೊಳವೆಬಾವಿ ನೀರನ್ನು ಪರೀಕ್ಷಿಸುವುದರಿಂದ ಜನತೆಗೆ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವನಿತಾ ತಿರುಮಲೇಶ್, ಪಿಡಿಓ ಶಾರದಾ, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಸದಸ್ಯರಾದ ರವಿಪ್ರಸಾದ್, ನಾರಾಯಣಸ್ವಾಮಿ, ದೇವರಾಜ್, ಭಾಗ್ಯಮ್ಮ, ಶಿವಕುಮಾರ್, ಕಮಲಮ್ಮ, ಬಚ್ಚೇಗೌಡ, ಗೋಪಾಲರೆಡ್ಡಿ, ನಾಗೇಶ್, ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.