Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಪುರಾಣ ಪ್ರಸಿದ್ಧ ಗಂಗಾದೇವಿ ಜಾತ್ರೆಯು ಪ್ರಯುಕ್ತ, ಮಂಗಳವಾರ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆಯೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವದಲ್ಲಿ ಹೆಣ್ಣುಮಕ್ಕಳು ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಅಮ್ಮನವರ ದೀಪೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕೇಶವಾರ, ಹಂಡಿಗನಾಳ, ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ, ಗಂಗನಹಳ್ಳಿ ಮುಂತಾದೆಡೆಯಿಂದ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿದ್ದರು.
ಮಳ್ಳೂರು ಗ್ರಾಮದಿಂದ ಹೆಣ್ಣುಮಕ್ಕಳು ತಲೆಯಮೇಲೆ ಹೂಗಳಿಂದ ಅಲಂಕರಿಸಿರುವ ದೀಪಗಳನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ವಾದ್ಯವೃಂದದೊಡನೆ ಆಗಮಿಸಿದ್ದು ವಿಶೇಷವಾಗಿತ್ತು. ಮಳ್ಳೂರಿನಿಂದ ಆಗಮಿಸಿದ ಭಕ್ತರಿಗೆ ಮೇಲೂರಿನ ಗ್ರಾಮ ಪಂಚಾಯಿತಿ ವತಿಯಿಂದ ಸ್ವಾಗತವನ್ನು ಕೋರಿ, ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ನೀಡಿ ಸತ್ಕರಿಸಿದುದು ಗ್ರಾಮಗಳ ನಡುವಿನ ಭಾವೈಕ್ಯತೆಯನ್ನು ಸಾರಿತು.
“ನಮ್ಮ ಮೇಲೂರು ಗ್ರಾಮದ ಅಧಿದೇವತೆ ಗಂಗಮ್ಮ ತಾಯಿಯು ಮಳೆ ಬೆಳೆಯನ್ನು ನೀಡಿ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರತಿವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಸುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮೆಲ್ಲಾ ಗ್ರಾಮಗಳಿಂದ ಬೇರೆ ಊರುಗಳಿಗೆ ಹೋಗಿರುವ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಬಂದು ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ” ಎಂದು ಮೇಲೂರಿನ ಶ್ರೀನಿವಾಸ್ ಪುಲಿ ತಿಳಿಸಿದರು.