ತಾಲ್ಲೂಕಿನ ಮೇಲೂರಿನಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕನ್ನಡ ರೈತ ಯುವಕ ಸಂಘದ ವತಿಯಿಂದ ನವದೇವತೆಗಳ ಉತ್ಸವವನ್ನು ಆಯೋಜಿಸಲಾಗಿತ್ತು. ಪ್ರತಿಯೊಂದು ದೇವರನ್ನೂ ಪಲ್ಲಕ್ಕಿಗಳಲ್ಲಿ ಹೊತ್ತು ಮೇಲೂರಿನ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಪೂಜಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೇಲೂರಿನ ಸುಪ್ರಸಿದ್ಧ ಗಂಗಾದೇವಿ ಆದಿಯಾಗಿ ಶ್ರೀ ಉಮಾಮಹೇಶ್ವರ, ಶ್ರೀ ಚನ್ನಕೇಶವ, ಶ್ರೀ ಸುಗ್ಗಲಮ್ಮದೇವಿ, ಶ್ರೀ ಚೌಡೇಶ್ವರಿದೇವಿ, ಶ್ರೀ ಮುನೇಶ್ವರಸ್ವಾಮಿ, ಶ್ರೀ ಸಪ್ಪಲಮ್ಮದೇವಿ, ನಗರದೇವತೆ ಶ್ರೀ ಅಣ್ಣಮ್ಮ, ಗಡ್ಡದನಾಯಕನಹಳ್ಳಿ ಶ್ರೀ ದುರ್ಗಾಮಹೇಶ್ವರಿದೇವಿಯವರ ನವದೇವತೆಗಳ ಉತ್ಸವ ಮಹೋತ್ಸವವನ್ನು ಹಾಗೂ ಮೆರವಣಿಗೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ವೀರಗಾಸೆ, ಡೋಲು, ಮಂಗಳ ವಾದ್ಯಗಳು, ಕರಡಿ ಸಮ್ಮೇಳ, ಗಾರುಡಿ ಗೊಂಬೆಗಳು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಮೆರುಗನ್ನು ತಂದವು.
“ಮಾತೃ ದೇವತಾ ಪಂಥದ ಜನಪದ ರೂಪಗಳೇ ಗ್ರಾಮ ದೇವತೆಗಳು. ಹಿಂದಿನ ಕಾಲದಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿತ್ತು. ಮಾತೃ ದೇವತೆಗಳ ಪ್ರತಿನಿಧಿಗಳಾದ ಗ್ರಾಮದೇವತೆಗಳು ಗ್ರಾಮಗಳಲ್ಲಿ ಆರಾಧನೆಗೆ ಒಳಗಾದವು. ಗ್ರಾಮದೇವತೆಗಳು ಜನಪದರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದುದು ಮಾತ್ರವಲ್ಲದೆ ಸಾಮಾಜಿಕ ಬದುಕನ್ನು ನಿಯಂತ್ರಿಸುವ ಸಾಧನಗಳೂ ಆಗಿದ್ದವೆಂಬುದು ಅರಿವಿಗೆ ಬರುತ್ತದೆ.
ಗ್ರಾಮದೇವತೆಯು ಗ್ರಾಮಸ್ಥರ ತಾಯಿ ಅಥವಾ ರಕ್ಷಕ ದೇವತೆಯನ್ನಿಸಿಕೊಳ್ಳುತ್ತಿದ್ದಳು. ಗ್ರಾಮಸ್ಥರ ಅಭಿಪ್ರಾಯದಂತೆ ಅವಳು ಗ್ರಾಮದ ಬೆಳೆಗಳನ್ನು ಕಾಪಾಡುತ್ತಾಳೆ. ಹೈನು ಹೆಚ್ಚಿಸುತ್ತಾಳೆ. ಸಕಾಲಕ್ಕೆ ಮಳೆಯನ್ನು ತರುತ್ತಾಳೆ. ಒಡ್ಡುಗಳನ್ನು ಸಂರಕ್ಷಿಸುತ್ತಾಳೆ, ಸಾಂಕ್ರಾಮಿಕ ರೋಗಗಳು ಊರೊಳಗೆ ಬಾರದಂತೆ ತಡೆಯುತ್ತಾಳೆ. ಭಕ್ತರ ರೋಗರುಜಿನಗಳನ್ನು ನಿವಾರಿಸುತ್ತಾಳೆ, ಸಂಕಷ್ಟಗಳನ್ನು ಪರಿಹರಿಸುತ್ತಾಳೆ, ಶಿಶುಮರಣವನ್ನು ತಡೆಯುತ್ತಾಳೆ. ಜಗಳಗಳನ್ನು ಪರಿಹರಿಸುತ್ತಾಳೆ. ಹೊಲದ ಗಡಿಗಳನ್ನು ನಿರ್ಧರಿಸುತ್ತಾಳೆ, ಭೂತ – ಪ್ರೇತ- ಗಾಳಿಗಳನ್ನು ನಿವಾರಿಸಿ ಹುಚ್ಚು ಬಿಡುತ್ತಾಳೆ. ಬಂಜೆತನವನ್ನು ಹೋಗಲಾಡಿಸಿ ಸಂತಾನ ಕೊಡುತ್ತಾಳೆ. ಗ್ರಾಮಸ್ಥರು ನಂಬುವಂತೆ ಈ ತಾಯಿ ಇಂಥ ಇನ್ನೂ ಅನೇಕ ಕಾರ್ಯಗಳನ್ನು ನಿರ್ವಹಿಸಬಲ್ಲಳು ಅಥವಾ ನಿರ್ವಹಿಸುತ್ತಿದ್ದಳು. ಅದಕ್ಕಾಗಿ ಗ್ರಾಮಸ್ಥರೆಲ್ಲರ ಸಹಕಾರದೊಂದಿಗೆ ನಮ್ಮ ಗ್ರಾಮ ಹಾಗೂ ತಾಲ್ಲೂಕಿಗೆ ಒಳಿತಾಗಲೆಂದು ನವದೇವತೆಗಳ ಉತ್ಸವವನ್ನು ಆಯೋಜಿಸಿದ್ದೇವೆ” ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ತಿಳಿಸಿದರು.