Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ದೇವರುಗಳ ತವರೂರು ಮತ್ತು ದೇವರಿಗೆ ಮಡಿಲು ತುಂಬಿದ ಊರೆಂದೆ ಹೆಸರಾದ ದೇವರಮಳ್ಳೂರು ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಮಳ್ಳೂರಾಂಭ ದೇವಿಯ ಬ್ರಹ್ಮ ರಥೋತ್ಸವವು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹಲವು ದಶಕಗಳಿಂದಲೂ ನಡೆದುಕೊಂಡು ಬಂದಿರುವ ಶ್ರೀಮಳ್ಳೂರಾಂಭ ದೇವಿಯ ಬ್ರಹ್ಮ ರಥೋತ್ಸವಕ್ಕೆ ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.
ಅಲಂಕೃತ ರಥದಲ್ಲಿ ಶ್ರೀಮಳ್ಳೂರಾಂಭ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುವ ಮೂಲಕ ರಥೋತ್ಸವಕ್ಕೆ ತಹಶೀಲ್ದಾರ್ ಬಿ.ಎನ್.ಸ್ವಾಮಿ ಚಾಲನೆ ನೀಡಿದರು. ನಂತರ ತೇರು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ರಥೋತ್ಸವದ ವೈಭವವನ್ನು ಕಣ್ತುಂಬಿಕೊಂಡರು. ಭಕ್ತಿಯಿಂದ ಪೂಜೆ ಸಲ್ಲಿಸಿ ನಮಿಸಿದರು.
ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗಾರುಡಿಬೊಂಬೆ, ಕೀಲುಕುದುರೆ, ವೀರಗಾಸೆ, ತಮಟೆ ವಾದನ ಆಕರ್ಷಕವಾಗಿತ್ತು. ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವವರು, ದಿನೋಪಯೋಗಿ ವಸ್ತುಗಳು ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು ಜನಾಕರ್ಷಕವಾಗಿದ್ದವು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ಶಾಸಕ ಬಿ.ಎನ್.ರವಿಕುಮಾರ್, ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್‌ಗೌಡ, ಬಿಜೆಪಿ ಮುಖಂಡ ಸೀಕಲ್ ಆನಂದಗೌಡ, ಸಿಪಿಐ ಎಂ.ಶ್ರೀನಿವಾಸ್, ದೇವಾಲಯ ಸಮಿತಿಯ ಅಧ್ಯಕ್ಷ ವಕೀಲ ಮುನಿರಾಜುಗೌಡ, ಸುಬ್ರಮಣ್ಯಪ್ಪ, ವೇಣುಗೋಪಾಲ್, ಬಿ.ಎಲ್.ಮುನಿರಾಜು, ಆಂಜಿನಪ್ಪ, ಸೊಣ್ಣೇನಹಳ್ಳಿ ಮೂರ್ತಿ, ಅರ್ಚಕ ಹರೀಶ್, ದೇವರಮಳ್ಳೂರು ಗ್ರಾ.ಪಂ.ಅಧ್ಯಕ್ಷೆ ಸುಶೀಲಮ್ಮ ಮುನಿಶಾಮಿ, ಸದಸ್ಯ ವೆಂಕಟೇಶ್, ಕೆಂಪೇಗೌಡ, ವೆಂಕೋಬರಾವ್, ಬಂಕ್ ಮುನಿಯಪ್ಪ, ತಾದೂರು ರಘು ಭಾಗವಹಿಸಿದ್ದರು.