Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯ, ಭಾರತ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ, ಅಡುಗೆ ಕೋಣೆ ಹಾಗೂ ಅಂಗನವಾಡಿ ಕೇಂದ್ರ ಕಟ್ಟಡಗಳ ಉದ್ಘಾಟನೆ ಸಮಾರಂಭ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ನೂತನ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದ ಶಾಸಕ ಬಿ.ಎನ್ ರವಿಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಮೇಲೆ ಎಲ್ಲ ಪಕ್ಷದ ಬೆಂಬಲಿತ ಸದಸ್ಯರಿರುತ್ತಾರೆ. ಇದರಿಂದಾಗಿ ಪಕ್ಷಾತೀತವಾಗಿ ಕೆಲಸಮಾಡಬೇಕಿದೆ. ಪ್ರಾಮಾಣಿಕವಾಗಿ ಜನಪರ ಅನುಕೂಲತೆ ಮಾಡಿಕೊಟ್ಟಷ್ಟೂ, ಜನರ ಮನಸ್ಸಿನಲ್ಲಿ ಬೇರೂರುತ್ತೇವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮುಖ್ಯವಾಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸುಗಮವಾಗಿ ಜನರ ಕೆಲಸ ಕಾರ್ಯಗಳು ನಡೆಯಬೇಕು. ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಸ್ವಚ್ಛತೆ, ವಿದ್ಯುತ್ ದೀಪಗಳು, ಚರಂಡಿಗಳ ಸ್ವಚ್ಛತೆ, ಕುಡಿಯುವ ನೀರಿನ್ನು ಆದ್ಯತೆಯಾಗಿ ಕೊಡುವ ಕೆಲಸ ಆಗಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಅಭಿವೃದ್ಧಿ ಕೆಲಸಗಳು ಮತ್ತು ಸರ್ಕಾರದಿಂದ ಬರುವಂತಹ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಂತಹ ಕೆಲಸ ಪ್ರಾಮಾಣಿಕವಾಗಿ ಮಾಡಬೇಕೆಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಜೆಡಿಎಸ್ ಮುಖಂಡ ತಾದೂರು ರಘು, ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಜೆ ಶ್ರೀಧರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬೈರೇಗೌಡ, ಮಾಜಿ ಅಧ್ಯಕ್ಷ ಕೆಂಪೇಗೌಡ, ನಿರ್ದೇಶಕ ಕೇಶವಮೂರ್ತಿ, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ ಉಮೇಶ್, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜಿ.ಪವಿತ್ರ, ಸತೀಶ್, ಹರೀಶ್, ಅಶೋಕ್, ಶ್ರೀಧರ್, ಎಂ.ಆರ್. ಮಂಜುನಾಥ್ ಬಾಬು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹಾಜರಿದ್ದರು.