Mallur, Sidlaghatta : ಎರಡು ತುಂಡಾಗಿದ್ದ ಕೈಯನ್ನು ಮರು ಜೋಡಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಅಪರೂಪದ ಸಾಧನೆ ಮಾಡುವಲ್ಲಿ ಶಸ್ತ್ರ ಚಿಕಿತ್ಸಾ ತಜ್ಞರಾದ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಡಾ.ಸತ್ಯವಂಶಿಕೃಷ್ಣ ನೇತೃತ್ವದ ವೈದ್ಯರ ತಂಡವು ಯಶಸ್ಸು ಸಾಧಿಸಿದೆ.
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ಗೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಬಲಗೈ ಎರಡು ತುಂಡಾಗಿತ್ತು. ತುಂಡಾಗಿದ್ದ ಮುಂಗೈ ಪೂರ್ಣವಾಗಿ ಬೇರ್ಪಟ್ಟಿತ್ತು. ತುಂಡಾಗಿ ಬಿದ್ದಿದ್ದ ಮುಂಗೈಯ್ಯನ್ನು ಐಸ್ ಬಾಕ್ಸ್ ನಲ್ಲಿ ಇಟ್ಟುಕೊಂಡು ಆತ ಸಮೀಪದಲ್ಲೆ ಇದ್ದ ಫೊರ್ಟೀಸ್ ಆಸ್ಪತ್ರೆಗೆ ಬಂದಿದ್ದಾನೆ.
ಶಸ್ತ್ರಚಿಕಿತ್ಸಾ ತಜ್ಞ ಡಾ.ಸತ್ಯವಂಶಿಕೃಷ್ಣ ನೇತೃತ್ವದ ಡಾ.ಅಕ್ಷಯ್, ಅರವಳಿಕೆ ತಜ್ಞ ಡಾ.ಕೇಶವರೆಡ್ಡಿ ಅವರ ತಂಡವು ಫೊರ್ಟೀಸ್ ಆಸ್ಪತ್ರೆಯಲ್ಲಿ ಸತತ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದು ತುಂಡಾಗಿದ್ದ ಕೈ ಹಾಗೂ ಮುಂಗೈನ ಮಾಂಸಖಂಡ, ಮೂಳೆ, ನರಗಳನ್ನು ಜೋಡಿಸಿದ್ದಾರೆ.
ಶಸ್ತ್ರಚಿಕಿತ್ಸೆ ನೆರವೇರಿಸಿ ಇದೀಗ ಮೂರು ವಾರಗಳಾಗಿದ್ದು ಶಸ್ತ್ರ ಚಿಕಿತ್ಸೆಗೆ ಒಳಗಾದ ಕೈ ಚಲನೆ ನಿಧಾನಕ್ಕೆ ಎಂದಿನಂತೆ ಸರಾಗವಾಗಿ ಆಡತೊಡಗಿದೆ. ಇನ್ನು 3-4 ತಿಂಗಳಲ್ಲಿ ಕೈ ಸಂಪೂರ್ಣವಾಗಿ ಎಂದಿನಂತಾಗಲಿದೆಯಂತೆ.
ಡಾ.ಸತ್ಯವಂಶಿಕೃಷ್ಣ ಅವರ ಈ ಅಪರೂಪದ ಸಾಧನೆಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಾ.ಸತ್ಯವಂಶಿಕೃಷ್ಣ ಅವರ ಅಣ್ಣ ಸಹ ವೈದ್ಯರಾಗಿದ್ದು ಡಾ.ಸಂದೀಪ್ ಪುವಾಡ ಅವರು ಮಹಿಳೆಯೊಬ್ಬರ ಕಿಡ್ನಿಯಲ್ಲಿನ 7.72 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು, ಶಸ್ತ್ರಚಿಕಿತ್ಸೆ ಮೂಲಕ ಅತಿ ಹೆಚ್ಚು ಗಾತ್ರದ ಗಡ್ಡೆ ತೆಗೆದಿರುವ ವೈದ್ಯಕೀಯ ಲೋಕದ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಇವರ ಹೆಸರಲ್ಲಿದೆ.
ಡಾ.ಸತ್ಯವಂಶಿಕೃಷ್ಣ ಅವರು ಡಾ.ಸಂದೀಪ್ ಪುವಾಡ ಅವರೊಂದಿಗೆ ಪುವಾಡ ಫೌಂಡೇಷನ್ ಮೂಲಕ ಮಲ್ಲಿ ಶೆಟ್ಟಿ ಗೌರಮ್ಮ ಆರೋಗ್ಯ ಕೇಂದ್ರವನ್ನು ತೆರೆದು ತಮ್ಮ ಹುಟ್ಟೂರು ಶಿಡ್ಲಘಟ್ಟದ ಮಳ್ಳೂರು ಗ್ರಾಮದಲ್ಲಿ ಪ್ರತಿ ಭಾನುವಾರ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದಾರೆ. ತಮ್ಮ ಫೌಂಡೇಷನ್ ಮೂಲಕ ಇದುವರೆಗೂ ಉಚಿತವಾಗಿ ಸುಮಾರು 11 ಸಾವಿರ ಮಂದಿಗೆ ನಾನಾ ರೀತಿಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿಕೊಟ್ಟಿದ್ದಾರೆ.
ಅಪಘಾತ ಅಥವಾ ದುರಂತದಲ್ಲಿ ಕೈ ಅಥವಾ ಕಾಲು ತುಂಡಾದಾಗ ತುಂಡಾದ ಕೈ ಅಥವಾ ಕಾಲನ್ನು ಐಸ್ ಬಾಕ್ಸ್ ನಲ್ಲಿಟ್ಟುಕೊಂಡು 1 ಗಂಟೆಯೊಳಗೆ ಆಸ್ಪತ್ರೆಗೆ ಬಂದರೆ ಶಸ್ತ್ರ ಚಿಕಿತ್ಸೆ ಮಾಡಿ ಮತ್ತೆ ತುಂಡಾದ ಕೈ ಅಥವಾ ಕಾಲನ್ನು ಜೋಡಿಸುವ ಕೆಲಸವನ್ನು ವೈದ್ಯರು ಮಾಡಲು ಸಾಧ್ಯ. ಆದರೆ ಬಹಳಷ್ಟು ಮಂದಿಗೆ ಇದು ಸಾಧ್ಯವಾಗುವುದಿಲ್ಲ. ಬಹಳಷ್ಟು ಮಂದಿ ಆಸ್ಪತ್ರೆಗೆ ಬರುವಷ್ಟರಲ್ಲಿ ತಡವಾಗಲಿದ್ದು ಅಷ್ಟರಲ್ಲಿ ಮಾಂಸ ಖಂಡಗಳು ಕೊಳೆಯತೊಡಗಿರುತ್ತವೆ. ರಕ್ತ ಕಣಗಳು ಸಾಯುತ್ತವೆ. ಹಾಗಾಗಿ ಶಸ್ತ್ರಚಿಕಿತ್ಸೆ ಮಾಡಿದರೂ ಯಶಸ್ವಿಯಾಗುವುದಿಲ್ಲ.
ಆದರೆ ಈ ಘಟನೆಯಲ್ಲಿ ಐಸ್ ಬಾಕ್ಸ್ ನಲ್ಲಿ ತುಂಡಾದ ಕೈನ ಮುಂಗೈನ ತುಂಡನ್ನು ತೆಗೆದುಕೊಂಡು ಸಕಾಲಕ್ಕೆ ಆಸ್ಪತ್ರೆಗೆ ಬಂದಿದ್ದರಿಂದ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಿ ಕೈಯ್ಯನ್ನು ಜೋಡಿಸಿದ ತೃಪ್ತಿ ನನಗಿದೆ ಎನ್ನುತ್ತಾರೆ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಸತ್ಯವಂಶಿಕೃಷ್ಣ.