ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಶೂನ್ಯ ಮಲೇರಿಯಾ ಗುರಿ ತಲುಪೋಣ ಎಂಬ ಘೋಷ ವಾಕ್ಯದಡಿ ಶನಿವಾರ ಆಯೋಜಿಸಲಾಗಿದ್ದ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯನ್ನುದ್ದೇಶಿಸಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಮುಂಗಾರು ಮಳೆ ಆರಂಭವಾಗಿದ್ದು ಮಳೆ ನೀರು ನಿಲ್ಲುವ ಕೆರೆ, ಕುಂಟೆ ಮತ್ತಿತರ ಕಡೆ ಸ್ವಚ್ಚತೆ ಕಾಪಾಡುವುದು ಸೇರಿದಂತೆ ಸೊಳ್ಳೆ ನಿಯಂತ್ರಿಸಲು ಪ್ರತಿಯೊಬ್ಬರೂ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
2025 ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವನ್ನಾಗಿಸುವುದು ಸರ್ಕಾರದ ಗುರಿಯಾಗಿದ್ದು ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿರುವ ಸೊಳ್ಳೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಜರುಗಿಸಬೇಕು. ನಗರಸಭೆ ಸಿಬ್ಬಂದಿ ನಗರದಾದ್ಯಂತ ಸ್ವಚ್ಚತೆ ಕಾಪಾಡಬೇಕು. ಅದೇ ರೀತಿ ಗ್ರಾಮೀಣ ಭಾಗಗಳಲ್ಲಿ ಸ್ವಚ್ಚತೆ ಹಾಗೂ ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆ ಉತ್ಪಾದನೆಯಾಗದಂತೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಮಲೇರಿಯಾ ತಡೆಗಟ್ಟಲು ವಾರಕ್ಕೊಂದು ದಿನವನ್ನು ಒಣಗಲು ದಿನವನ್ನಾಗಿ ಆಚರಿಸಲು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ಮಲೇರಿಯಾ ಮುಕ್ತ ರಾಜ್ಯವನ್ನಾಗಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳ ಸಹಕಾರ ಅತ್ಯಗತ್ಯ, ನಗರದಲ್ಲಿ ಜನಸಂಖ್ಯೆ ಅಧಿಕವಾಗಿದ್ದು ನಗರದ ಸ್ವಚ್ಚತೆ ಬಗ್ಗೆ ನಗರಸಭೆ ಸಿಬ್ಬಂದಿ ಹೆಚ್ಚಿನ ಕಾಳಜಿ ವಹಿಸಬೇಕು. ನಗರದ ಜನವಸತಿ ಪ್ರದೇಶದಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಕಾಲ ಕಾಲಕ್ಕೆ ಕೀಟ ನಾಶಕ ಸಿಂಪಡಣೆ, ಜೊತೆಗೆ ನೀರು ಶೇಖರಿಸುವ ತೊಟ್ಟಿ, ಡ್ರಮ್ ಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಸೇರಿದಂತೆ ವಾರದ ಒಣಗಲು ದಿನದ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕಿ ಶೋಭಾ, ಶಿಕ್ಷಣ ಸಂಯೋಜಕ ಭಾಸ್ಕರಗೌಡ, ಕೃಷಿ ಇಲಾಖೆಯ ಮಂಜುನಾಥ್, ತೋಟಗಾರಿಕೆ ಇಲಾಖೆಯ ರಮೇಶ್, ರೇಷ್ಮೆ ಇಲಾಖೆಯ ತಿಮ್ಮರಾಜು, ಆರೋಗ್ಯ ಇಲಾಖೆಯ ಡಾ.ಗುರು, ಸಿಬ್ಬಂದಿ ದೇವರಾಜ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi