Sidlaghatta : ಜನಸಾಮಾನ್ಯರ ಕವಿಯಾದ ಯೋಗಿ ವೇಮನರು ಜಾತೀಯತೆ, ಅಂಧಶ್ರದ್ಧೆ, ಮೇಲು ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು. ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಅವರು ಅಪೂರ್ವ ಸಮಾಜ ಸುಧಾರಕ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇಮನರ ಮಾತುಗಳು ಬರಿಯ ಮಾತುಗಳಲ್ಲ. ಅವುಗಳು ವೇದವೇ ಆಗಿವೆ. ನಮ್ಮ ಜನ ವೇಮನರ ಕುರಿತು, “ವೇದಾತೀತನು ವೇಮನು ಕಾಣಾ, ವೇಮನ ಮಾತದು ವೇದವು ಕಾಣಾ” ಎಂದು ಹಾಡಿದ್ದಾರೆ.
ವೇಮನರ ಪದ್ಯಗಳು ಕನ್ನಡ, ತಮಿಳು, ಮಲೆಯಾಳಿ, ಇಂಗ್ಲಿಷ್ ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಹೀಗಾಗಿ ವೇಮನರ ಸಾಹಿತ್ಯ ಈ ಎಲ್ಲ ಭಾಷಾ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿರುವುದಲ್ಲದೆ, ವಿಶ್ವ-ಸಾಹಿತ್ಯಕ್ಕೂ ಭೂಷಣಪ್ರಾಯವಾಗಿದೆ.
ವೇಮನರ ತತ್ತ್ವ ಸಂದೇಶಗಳ ಜ್ಞಾನ ಮತ್ತು ಜಾಗೃತಿ ಜನರಲ್ಲಿ ಮೂಡಬೇಕು, ಶಾಂತಿ, ಸಮತೆ, ಸೌಹಾರ್ದತೆಯ ಪರಿಮಳ ಜನಮನದಲ್ಲಿ ಪಸರಿಸುವಂತಾಗಬೇಕು ಎನ್ನುವ ಉದಾತ್ತ ಧ್ಯೇಯದೊಂದಿಗೆ ವೇಮನರ ಜಯಂತ್ಯುತ್ಸವವನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಮುಖಂಡರಾದ ಮೇಲೂರು ಮಂಜುನಾಥ್ ಹಾಜರಿದ್ದರು.