Sidlaghatta : ಭೂ ಪರಿವರ್ತಿತ ಜಮೀನಿನ ನಕ್ಷೆ ಮಂಜೂರಾತಿಗೆ ಅನುಮೋದನೆ ನೀಡಲು 1.5 ಲಕ್ಷ ರೂ ಲಂಚ ಪಡೆಯುತ್ತಿದ್ದಾಗ ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ತಾಲ್ಲೂಕಿನ ಜಂಗಮಕೋಟೆ ಹೋಬಳಿ ಘಟ್ಟಮಾರನಹಳ್ಳಿಯ ನಂಜೇಗೌಡ ಅವರು ತಮ್ಮ 39 ಗುಂಟೆ ಪರಿವರ್ತಿತ ಜಮೀನಿನ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು ಇಒ ಅವರು 2 ಲಕ್ಷ ರೂಗಳ ಬೇಡಿಕೆಯಿಟ್ಟಿದ್ದರಂತೆ. ಈ ಪೈಕಿ 1.5 ಲಕ್ಷ ರೂಗಳನ್ನು ಇಒ ಅವರ ಕಚೇರಿಯಲ್ಲಿ ಇಒ ಅವರಿಗೆ ನೀಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್.ಐ ಮೋಹನ್ ನೇತೃತ್ವದ ಲೋಕಾಯುಕ್ತ ಪೊಲೀಸರ ತಂಡವು ದಾಳಿ ನಡೆಸಿದ್ದು ಲಂಚದ ಹಣ 1.5 ಲಕ್ಷ ರೂ ಸಮೇತ ಇಒ ಅವರನ್ನು ವಶಕ್ಕೆ ಪಡೆದಿದ್ದಾರೆ.
ನಂತರ ಇಒ ಮುನಿರಾಜ ಅವರ ಕೋಲಾರದ ಮನೆಗೂ ತೆರಳಿರುವ ಲೋಕಾಯುಕ್ತ ಪೊಲೀಸರು ಮನೆಯಲ್ಲಿಯೂ ತೀವ್ರ ಶೋಧ ನಡೆಸಿದ್ದಾರೆ. ನಂಜೇಗೌಡ ಅವರ ಭೂ ಪರಿವರ್ತಿತ ಜಮೀನಿನ ನಕ್ಷೆ ಅನುಮೋಧನೆಗೆ ಸಂಬಂಧಿಸಿದ ಅರ್ಜಿಯಲ್ಲದೆ ಇತರೆ ದಾಖಲೆಗಳನ್ನು ತಡಕಾಡಿದ್ದಾರೆ.
ನಂತರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಒ ಮುನಿರಾಜ ಅವರ ಆರೋಗ್ಯ ತಪಾಸಣೆ ನಡೆಸಿದ್ದು ಇನ್ನಷ್ಟು ವಿಚಾರಣೆ, ಮಾಹಿತಿ ಕಲೆ ಹಾಕುವ ಕೆಲಸ ಮುಂದುವರೆದಿದೆ.
ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರ ಕುಮಾರ್, ಶಿವಪ್ರಸಾದ್, ಎಸ್‌ಐ ಮೋಹನ್, ಸಿಬ್ಬಂದಿ ಸಂತೋಷ್, ಸತೀಶ್, ನಾಗರಾಜ್, ಲಿಂಗರಾಜ, ಗುರು, ಚೌಡರೆಡ್ಡಿ, ಪ್ರಕಾಶ್ ಹಾಜರಿದ್ದು ಹೆಚ್ಚಿನ ವಿವರ ಕಲೆಹಾಕುವ, ದಾಖಲೆಗಳನ್ನು ಸಂಗ್ರಹಿಸುವ ಕೆಲಸ ಮುಂದುವರೆಸಿದ್ದಾರೆ.