Sidlaghatta : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದ 69 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಒಂದು ಲಕ್ಷ ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಜಾನಪದ ಕ್ಷೇತ್ರದ ಸಾಧನೆಗೆ ಜಿಲ್ಲೆಯ ವೀರಭದ್ರಯ್ಯ ಅವರಿಗೆ ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರಡಿ ಚಮ್ಮೇಳ, ವೀರಗಾಸೆ ಕುಣಿತದಲ್ಲಿ ಅಪಾರ ಅನುಭವವುಳ್ಳ ವೀರಭದ್ರಯ್ಯ(67) ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದವರು. ಸುಮಾರು 35 ವರ್ಷಗಳಿಂದ ಈ ಕಲಾಪ್ರಕಾರದಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಶಿಷ್ಯರನ್ನೂ ಹೊಂದಿದ್ದಾರೆ.
ಕರಡಿ ಚಮ್ಮೇಳ ವಾದನವನ್ನು ನುಡಿಸುವ ಕಲೆಯನ್ನು ತಮ್ಮ ತಂದೆಯಿಂದ ಕಲಿತ ವೀರಭದ್ರಯ್ಯ, ಚಿಕ್ಕಂದಿನಿಂದಲೇ ಕಲಾ ಪ್ರದರ್ಶನವನ್ನು ನೀಡುತ್ತಾ ಬಂದಿರುವರು.
“ಕಲಾ ಜ್ಯೋತಿ” ಎಂಬ ಸಂಸ್ಥೆಯನ್ನು ಕಟ್ಟಿರುವ ಇವರು, ತಮ್ಮ ಸಂಸ್ಥೆಯ ಮೂಲಕ ಹಲವಾರು ಯುವ ಪ್ರತಿಭೆಗಳಿಗೆ ವೀರಗಾಸೆ ಕುಣಿತ, ಕರಡೆ ಚಮ್ಮೇಳ, ನಾಸಿಕ್ ಡೊಳ್ಳು, ನಂದಿಧ್ವಜ ಮೊದಲಾದ ಕಲೆಗಳಲ್ಲಿ ತರಬೇತಿ ನೀಡುತ್ತಾ ಬಂದಿರುವರು.
“ಕಲಾ ಜ್ಯೋತಿ” ಸಂಸ್ಥೆಯ ಕಲಾವಿದರನ್ನು ಕರೆದುಕೊಂಡು, ಜಿಲ್ಲೆ, ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ತಮ್ಮ ಪ್ರದರ್ಶನ ನೀಡಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ಕೊಪ್ಪಳ ಜಿಲ್ಲಾ ಉತ್ಸವ, ಬೀದರ್ ಉತ್ಸವ, ಚಿಕ್ಕಬಳ್ಳಾಪುರ ಉತ್ಸವಗಳಲ್ಲಿ ಇವರ ಪ್ರದರ್ಶನ ಜನಮೆಚ್ಚುಗೆ ಗಳಿಸಿದ್ದವು. 2021-22 ನೇ ಸಾಲಿನಲ್ಲಿ ಜಾನಪದ ಕ್ಷೇತ್ರದ ಇವರ ಸಾಧನೆಯನ್ನು ಪರಿಗಣಿಸಿ ಜಿಲ್ಲಾಡಳಿತ ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರು.
“ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತಿಳಿದು ಬಹಳ ಸಂತೋಷವಾಯಿತು. ಇದು ಕರಡಿ ಚಮ್ಮೇಳ, ವೀರಗಾಸೆ ಎಂಬ ಜಾನಪದ ಕಲೆಗೆ ಸಿಕ್ಕ ಗೌರವ ಮತ್ತು ಜಿಲ್ಲೆಯ ಜಾನಪದ ಹಿರಿಮೆಗೆ ಸಿಕ್ಕ ಪ್ರಶಸ್ತಿ”
ವೀರಭದ್ರಯ್ಯ, ಕೊತ್ತನೂರು, ಶಿಡ್ಲಘಟ್ಟ ತಾಲ್ಲೂಕು