Home News ಕೊತ್ತನೂರು ಕೆರೆ ಹೂಳೆತ್ತುವ ಕಾರ್ಯಕ್ಕೆ ಗುದ್ದಲಿ ಪೂಜೆ

ಕೊತ್ತನೂರು ಕೆರೆ ಹೂಳೆತ್ತುವ ಕಾರ್ಯಕ್ಕೆ ಗುದ್ದಲಿ ಪೂಜೆ

0
Dharmasthala Gramabhivruddi Sangha Kothanur Sidlaghatta Lake rejuvenation Program

ತಾಲ್ಲೂಕಿನ ಕೊತ್ತನೂರು ಕೆರೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೆರೆ ಸಂಜೀವಿನಿ ಕಾರ್ಯಕ್ರಮದ ಅಡಿಯಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.

ನಮ್ಮ ಭಾಗದಲ್ಲಿ ನದಿ ನಾಲೆಗಳಿರದ ಕಾರಣ ನಾವುಗಳು ಹಿಂದಿನಿಂದಲೂ ನಂಬಿರುವುದು ಆಗಸದಿಂದ ಬೀಳುವ ಮಳೆಯನ್ನು. ಅದನ್ನು ಹಿಡಿದಿಡಲೆಂದೇ ಹಿಂದಿನವರು ಕೆರೆಗಳನ್ನು ಕಟ್ಟಿಸಿದ್ದಾರೆ. ಅವುಗಳನ್ನು ಉಳಿಸಿಕೊಂಡು, ಮಳೆ ನೀರು ಹಿಡಿದಿಟ್ಟುಕೊಳ್ಳಲು ಅನುವು ಮಾಡಿಕೊಡಲು ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ರುಪಿಸಿರುವುದು ತುಂಬಾ ಉಪಯುಕ್ತಕರ ಎಂದು ಅವರು ತಿಳಿಸಿದರು.

 ಜಿಲ್ಲೆಯಲ್ಲಿ ಕೆರೆಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದು ಕೃಷಿ ಕ್ಷೇತ್ರಕ್ಕೆ ಅಲ್ಲದೆ ಕುಡಿಯುವ ನೀರಿಗೂ ತೀವ್ರ ಅಭಾವವಾಗಿದೆ. ಇಂತಹ ಸಮಯದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಕೆರೆಗಳಲ್ಲಿ ಹೂಳೆತ್ತುವ ಯೋಜನೆ ವರದಾನವಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿ ಅಂತರ್ಜಲಮಟ್ಟ ಹೆಚ್ಚಲು ಸಹಕಾರಿಯಾಗಲಿದೆ ಎಂದು ಹೇಳಿದರು.

  ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯಿಂದ ಕೇವಲ ಸಾಮಾಜಿಕ ಕಾರ್ಯಕ್ರಮಗಳು ಅಲ್ಲದೆ ಮಹಿಳೆಯರಿಗೆ ತರಬೇತಿ ನೀಡಿ ಧನ ಸಹಾಯವನ್ನು ನೀಡುವುದರಿಂದ ಮಹಿಳೆಯರು ಸ್ವಾವಲಂಭಿಗಳಾಗಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು. ಹಳೆಯ ದೇವಾಲಯಗಳ ಜೀರ್ಣೋದ್ದಾರ ಮತ್ತು ಅವಿದ್ಯಾವಂತರಿಗೆ ಶಿಕ್ಷಣ ನೀಡುವ ಅಂಗವಿಕಲರಿಗೆ ವೃದ್ದರಿಗೆ ಹಾಗೂ ವಿಧವೆಯರಿಗೆ ಮಾಶಾಸನ ಮುಂತಾದ ಸಾಮಾಜಿಕ ಕಾರ್ಯಗಳನ್ನು ಯಾವುದೆ ಪ್ರತಿಫಲಾಪೇಕ್ಷೆಯಿಲ್ಲದೆ ಸಂಸ್ಥೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ಯೋಜನಾ ನಿರ್ದೇಶಕ ಬಿ.ವಸಂತ್ ಮಾತನಾಡಿ, ಕಳೆದ 4 ವರ್ಷಗಳಿಂದ  ಕೆರೆಗಳ ಪುನಶ್ಚೇತನ ಕಾರ್ಯಕ್ರಮ ನಡೆಯುತಿದೆ. ಕಳೆದ ಮಳೆಗಾಲದಲ್ಲಿ ಪುನಶ್ಚೇತನಗೊಂಡ ಎಲ್ಲ ಕೆರೆಗಳು ತುಂಬಿವೆ. ಇದರಿಂದಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳೂ ಮರುಜೀವ ಪಡೆದುಕೊಂಡಿವೆ. ರೈತರು ಕೃಷಿ ಕಾರ್ಯ ಪ್ರಾರಂಭಿಸಿದ್ದಾರೆ. ಜಾನುವಾರು, ಪ್ರಾಣಿ, ಪಕ್ಷಿಗಳ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ. ಕೊತ್ತನೂರು ಕೆರೆಯ ಪುನಶ್ಚೇತನದಿಂದ ಈ ಭಾಗದ ಜನ ಜಾನುವಾರುಗಳಿಗೂ ಸಾಕಷ್ಟು ಅನುಕೂಲವಾಗಲಿದೆ ಎಂದರು.

 ತಹಶೀಲ್ದಾರ್ ಬಿ.ಎಸ್. ರಾಜೀವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಪಿಡಿಒ ಅಶ್ವತ್ಥಪ್ಪ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ  ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಸುರೇಶ್, ವೆಂಕಟಸ್ವಾಮಿರಡ್ಡಿ, ಸುಭ್ರಮಣಿ, ಕೆರೆ ಸಮಿತಿ ಅಧ್ಯಕ್ಷ ಪಂಚಾಕ್ಷರಿ ರೆಡ್ಡಿ, ಪ್ರಾದೇಶಿಕ ನಿರ್ದೇಶಕ ಸೀನಪ್ಪ, ದೇವರಾಜು, ಚಂದ್ರಪ್ಪ, ದೇವರಾಜು, ಜ್ಞಾನೇಶ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version