Sidlaghatta : ರಾಜ್ಯ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ (Kodihalli chandrashekar) ರ ಭ್ರಷ್ಟಾಚಾರ ಪ್ರಕರಣವನ್ನು (Corruption case) ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ರ ಮೇಲೆ ಹಲ್ಲೆ ನಡೆಸಿದ ಹಲ್ಲೆಕೋರರನ್ನು ಬಂಧಿಸಿ ಗಡೀಪಾರು ಮಾಡಬೇಕು ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಬೆಳ್ಳೂಟಿ ಬಿ.ಕೆ.ಮುನಿಕೆಂಪಣ್ಣ ಆಗ್ರಹಿಸಿದರು.
ಬೆಂಗಳೂರಿನ ಗಾಂಧಿಭವನದಲ್ಲಿ ಮೇ 30 ರಂದು ಆಯೋಜಿಸಲಾಗಿದ್ದ ರೈತ ಆತ್ಮವಿಮರ್ಶೆ ಹಾಗೂ ಸ್ಪಷ್ಟೀಕರಣ ಸಭೆಯಲ್ಲಿ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ರ ಮೇಲೆ ಕಿಡಿಗೇಡಿಗಳು ನಡೆಸಿದ ಹಲ್ಲೆಯನ್ನು ಖಂಡಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ನಗರದ ತಾಲ್ಲೂಕು ಕಚೇರಿ ಮುಂಭಾಗ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ರಾಜ್ಯದ ವಿವಿಧ ರೈತ ಸಂಘಟನೆಗಳು ಕಳೆದ 40 ವರ್ಷದಿಂದ ನಾಡಿನ ರೈತರ ಸಂವಿಧಾನಬದ್ದ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಬಂದಿವೆ. ಖಾಸಗಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ರಾಜ್ಯ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ಅಕ್ರಮಗಳ ವಿಡಿಯೋಗಳು ಬಿತ್ತರಗೊಂಡಿದ್ದು, ಇವುಗಳಲ್ಲಿ ದೆಹಲಿಯಲ್ಲಿ ನಡೆದ ಐತಿಹಾಸಿಕ ಹೋರಾಟದ ಉಲ್ಲೇಖವಿರುವುದು ಕಂಡು ಬಂದಿದೆ. ಈ ಬಗ್ಗೆ ನಾಡಿನ ರೈತರು ಹಾಗೂ ನಾಗರಿಕರಿಗೆ ಸತ್ಯಾಂಶ ತಿಳಿಸುವುದು ಹಾಗೂ ರೈತ ಸಂಘದ ಮುಂದಿನ ನಿಲುವುಗಳ ಬಗ್ಗೆ ಚರ್ಚಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ವಿನಂತಿಯ ಮೇರೆಗೆ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯಿತ್, ಯದುವೀರ್‌ಸಿಂಗ್, ಕವಿತಾ ಕುರುಗುಂಟೆ, ಚುಕ್ಕಿನಂಜುಂಡಸ್ವಾಮಿ ಮತ್ತು ಕೆ.ಟಿ ಗಂಗಾಧರ್ ಮುಂತಾದ ಮುಖಂಡರು ಭಾಗವಹಿಸಿದ್ದ ಆತ್ಮವಿಮರ್ಶೆ ಹಾಗೂ ಸ್ಪಷ್ಟೀಕರಣ ಸಭೆಯಲ್ಲಿ ಏಕಾಏಕಿ ನುಗ್ಗಿದ ಕಿಡಿಗೇಡಿಗಳು ರೈತ ನಾಯಕ ರಾಕೇಶ್ ಟಿಕಾಯಿತ್ ಮೇಲೆ ರಾಸಾಯನಿಕಯುಕ್ತ ಕಪ್ಪು ಮಸಿ ಎರಚಿದ್ದಾರೆ. ಅಲ್ಲದೆ ರೈತ ಮುಖಂಡರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಹಾಗು ಈ ಘಟನೆಗೆ ಸರ್ಕಾರ ಹಾಗೂ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದರು.
ಕಳೆದ ಒಂದು ವಾರದಿಂದ ವಿವಿಧ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿಲ್ಲವೇ. ರಾಷ್ಟ್ರೀಯ ಮಟ್ಟದ ರೈತ ನಾಯಕರು ಸಭೆಗೆ ಬರುತ್ತಿರುವ ಬಗ್ಗೆ ಮಾಹಿತಿ ಹಾಗು ಅವರಿಗೆ ನೀಡಬೇಕಾದ ಭದ್ರತೆಯ ವೈಫಲ್ಯಕ್ಕೆ ಕಾರಣವೇನು ಎಂಬುದರ ಬಗ್ಗೆ ಸರ್ಕಾರ ಉತ್ತರಿಸಬೇಕು. ಹಲ್ಲೆಗೆ ಕಾರಣರಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಂಧಿಸಿ ಗಡೀಪಾರು ಮಾಡಬೇಕು. ಮುಂದಿನ ದಿನಗಳಲ್ಲಿ ರೈತ ಮುಖಂಡರಿಗೆ ಸೂಕ್ತ ಭದ್ರತೆ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಬಿ.ಎಸ್.ರಾಜೀವ್ ರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಉಪಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ, ಚಿಂತಾಮಣಿ ತಾಲ್ಲೂಕು ಕಾರ್ಯದರ್ಶಿ ಎಚ್.ಎನ್.ಕದಿರೇಗೌಡ, ಪದಾಧಿಕಾರಿಗಲಾದ ಭೀಮಣ್ಣ, ಆಂಜಿನಪ್ಪ, ಮುನೇಗೌಡ, ಬಾಬು, ಮಂಜುನಾಥ್, ಹರೀಶ್ ಹಾಜರಿದ್ದರು.