Gowdanahalli, Sidlaghatta : ಖಾಸಗಿ ವಿದ್ಯಾಸಂಸ್ಥೆಗಳು ಮತ್ತು ನಗರ ಕೇಂದ್ರಿತ ಪ್ರದೇಶಗಳಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆ ತಾಲ್ಲೂಕಿನ ಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು.
ಮಕ್ಕಳ ದಿನಾಚರಣೆ ಅಂಗವಾಗಿ ಎಲ್.ಕೆ.ಜಿ ಯಿಂದ ಎಂಟನೇ ತರಗತಿಯವರೆಗಿನ ಎಲ್ಲಾ 170 ಮಕ್ಕಳು ವಿವಿಧ ರೀತಿಯಲ್ಲಿ ವೇಷಭೂಷಣಗಳನ್ನು ಧರಿಸಿ, ಸಿಂಗಾರಗೊಂಡು ಸೌಂದರ್ಯ ಸ್ಪರ್ಧೆ(ಫ್ಯಾಷನ್ ಶೋ) ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
“ಈ ದಿನ ಶನಿವಾರವೂ ಆಗಿದಿದ್ದರಿಂದ ಎಲ್ಲಾ ಮಕ್ಕಳು ಬೆಳಗಿನ ಜಾವದ ಚಳಿಯನ್ನು ಲೆಕ್ಕಿಸದೆ ಅಮ್ಮಿಂದಿರನ್ನು ಕಾಡಿ ಬೇಡಿ ಬಹಳ ಸುಂದರವಾಗಿ ಸಿಂಗಾರಗೊಂಡು ಶಾಲೆಗೆ ಬಂದರು. ಒಬ್ಬರು ಮತ್ತೊಬ್ಬರನ್ನು ಮೀರಿಸುವಂತೆ ಯಾವ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ ಎಂಬಂತೆ ಮಿಂಚುತ್ತಾ ಆಗಮಿಸಿದರು. ಇದರಲ್ಲಿ ಪೊಷಕರ ಕಾಳಜಿ ಎದ್ದುಕಾಣುತ್ತಿತ್ತು. ಶಿಕ್ಷಕರು ತರಗತಿಗೆ ಇಬ್ಬರನ್ನು ಬಹುಮಾನಕ್ಕೆ ಆಯ್ಕೆಮಾಡಲು ಕಷ್ಟಪಡಬೇಕಾಯಿತು. ಮಕ್ಕಳ ದಿನಾಚರಣೆಗೆ ವರ್ಷ ವರ್ಷವೂ ಹೀಗೇ ಫ್ಯಾಷನ್ ಶೋ ಮಾಡಿಸಿ ಸಾರ್. ನಾವುಚೆನ್ನಾಗಿ ಡ್ರೆಸ್ ಮಾಡಿಕೊಂಡು ಬರ್ತೀವಿ. ಇದು ಮಕ್ಕಳ ಬೇಡಿಕೆಯಾಗಿದೆ” ಎಂದು ಮುಖ್ಯಶಿಕ್ಷಕ ಎಂ.ದೇವರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮೀಪತಿ, ಉಪಾಧ್ಯಕ್ಷೆ ಸುಮಾ, ಸದಸ್ಯರಾದ ವೆಂಕಟರೆಡ್ಡಿ, ವೆಂಕಟಶಿವ, ಬೈರಾರೆಡ್ಡಿ, ರಘುನಾಥ ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯೆ ಸೌಮ್ಯ ಶ್ರೀ ಮಂಜುನಾಥ, ಮುಖ್ಯ ಶಿಕ್ಷಕ ಎಂ ದೇವರಾಜ, ಶಿಕ್ಷಕರಾದ ಮಂಜುನಾಥ, ನಳಿನಾಕ್ಷಿ, ದಿವ್ಯಾ, ವಿದ್ಯಾರಾಣಿ, ಪೋಷಕರಾದ ಮುನಿಕೃಷ್ಣಪ್ಪ, ಗಾಯಿತ್ರಿ ಹಾಜರಿದ್ದರು.