Sidlaghatta : ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನಾಡು, ನುಡಿ, ಭಾಷೆ, ರಾಷ್ಟ್ರದ ಬಗ್ಗೆ ಎಲ್ಲರೂ ಅಭಿಮಾನ ಹೊಂದಿರಬೇಕು. ನೆಲ ಜಲ ಭಾಷೆಯ ರಕ್ಷಣೆಗೆ ಎಲ್ಲರೂ ಕೈ ಜೋಡಿಸಿ ಶ್ರಮಿಸಬೇಕು ಎಂದು ಕರವೇ ರಾಜ್ಯಾದ್ಯಕ್ಷ ಎಚ್.ಶಿವರಾಮೇಗೌಡ ಹೇಳಿದರು.
ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ನಾಡ ಹಬ್ಬ ಕನ್ನಡ ರಾಜ್ಯೋತ್ಸವವನ್ನು ನಮ್ಮ ಸರ್ಕಾರಗಳು ಸಹ ಇಷ್ಟೊಂದು ಅದ್ದೂರಿಯಾಗಿ ಆಚರಿಸುವುದಿಲ್ಲ, ಆದರೆ ಗಡಿಭಾಗದ ಜನರು ಇಷ್ಟೊಂದು ಅದ್ದೂರಿಯಾಗಿ ಆಚರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.
ನಗರದ ಬಸ್ ನಿಲ್ದಾಣದಿಂದ ಕೋಟೆ ವೃತ್ತದವರೆಗೂ ಹಂಸ ರಥದಲ್ಲಿ ಭುವನೇಶ್ವರಿ ತಾಯಿ ಹಾಗೂ ಪುನೀತ್ ರಾಜಕುಮಾರ್ ರವರ ಚಿತ್ರಪಟದೊಂದಿಗೆ ಮೆರವಣಿಗೆ ನಡೆಸಲಾಯಿತು. ವಿವಿಧ ಜಾನಪದ ಕಲಾತಂಡಗಳಿಂದ, ನೃತ್ಯ, ಗಾರಡಿಗೊಂಬೆ, ತಮಟೆ ವಾದನ, ಡೊಳ್ಳುಕುಣಿತ ಹಾಗು ವಿವಿಧ ವೇಷಧಾರಿಗಳು ಮೆರವಣಿಗೆಗೆ ಮತ್ತಷ್ಟು ಕಳೆ ತಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಜೊತಗೆ ನಟ ತಿಲಕ್ ನಟಿಸಿರುವ ಪಾಲಾರ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಾಸ್ಯ ನಟಿ ರಾಜೇಶ್ವರಿ, ನಟ ರಕ್ಷಕ್‌ಬುಲೆಟ್, ಕರವೇ ಜಿಲ್ಲಾಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ತಾಲ್ಲೂಕು ಅಧ್ಯಕ್ಷ ಎ.ಸುನಿಲ್, ಉಪಾಧ್ಯಕ್ಷ ವೇಣು, ಸಮರಸೇನೆ ತಾಲ್ಲೂಕು ಅಧ್ಯಕ್ಷ ಟಿ.ಶ್ರೀಕಾಂತ್, ಡಾ.ಸತ್ಯನಾರಾಯಣರಾವ್, ಡಾ.ವಿ.ವೆಂಕಟೇಶ್, ಅನಿತಾ ಮುನಿರಾಜ್, ಸಿ.ವಿ.ಲಕ್ಷ್ಮಣರಾಜು, ಡಾ.ಜಿ.ಎಂ.ಶ್ರೀನಿವಾಸ್, ಆರ್ಯ ಹಾಜರಿದ್ದರು.