ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ರಾಷ್ಟೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ ಮಾತನಾಡಿದರು.
ವಿಜ್ಞಾನ ಕಲಿಕೆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ವಿಜ್ಞಾನ ಬೋಧನೆ ಮಾಡುವ ಶಿಕ್ಷಕರು ಮಾಡಬೇಕು. ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ವಿಜ್ಞಾನ ಕಷ್ಟ ಎಂಬ ಭಾವನೆ ಇದ್ದು, ಇದನ್ನು ಆಕರ್ಷಕವಾಗಿ ಬೋಧನೆ ಮಾಡಿದಲ್ಲಿ ಓದುಗರ ಸಂಖ್ಯೆ ಹೆಚ್ಚುತ್ತದೆ. ದೇಶದ ಬೆಳವಣಿಗೆಯಲ್ಲಿ ವಿಜ್ಞಾನದ ಪಾತ್ರ ಅತ್ಯಂತ ಮಹತ್ವವಾದುದು. ಹೀಗಾಗಿ ವಿಜ್ಞಾನದ ವಿಷಯ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಸಿ.ಆರ್.ಪಿ ವೀಣಾ ಮಾತನಾಡಿ, ಶಿಕ್ಷಕರ ಮಾರ್ಗದರ್ಶನಲ್ಲಿ ಶಾಲೆಗಳಲ್ಲಿ ತಯಾರಿಸುವ ವಿಜ್ಞಾನ ವಸ್ತು ಮಾದರಿಗಳಿಂದ ವಿನೋದದ ಮೂಲಕವೇ ವಿಜ್ಞಾನದ ಕಡೆಗೆ ಮಕ್ಕಳ ಜ್ಞಾನವು ವೃದ್ಧಿಸುತ್ತದೆ. ಮಾನವ ಕುಲದ ಅಭಿವೃದ್ಧಿಗಾಗಿ ಹಾಗೂ ಶಾಂತಿಗಾಗಿ ಶ್ರಮಿಸುತ್ತಿರುವ ವಿಶ್ವದ ಎಲ್ಲಾ ವಿಜ್ಞಾನಿಗಳಿಗೆ ನಾವು ಅಭಿನಂದನೆ ತಿಳಿಸಬೇಕು. ವಿಜ್ಞಾನದ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಹೆಚ್ಚಿಸಬೇಕಿದೆ. ಇದಕ್ಕಾಗಿ ವಿಜ್ಞಾನ ಪ್ರದರ್ಶಗಳು ಬಹಳ ಸಹಕಾರಿಯಾಗಿವೆ ಎಂದು ಹೇಳಿದರು.
ಮುಖ್ಯಶಿಕ್ಷಕ ಚೌಡರೆಡ್ಡಿ, ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕ ಶ್ರೀಧರ್, ವಿಜ್ಞಾನ ಶಿಕ್ಷಕಿ ಶಿಲ್ಪಕಲಾ ತೀರ್ಪುಗಾರರಾಗಿದ್ದರು. ಪ್ರಥಮ ಬಹುಮಾನವನ್ನು ಜಯಸಿಂಹನ ಜೆಸಿಬಿ ಮಾಡೆಲ್ ಗೆ , ಎರಡನೆಯ ಬಹುಮಾನವನ್ನು ಐಶ್ವರ್ಯಳ ಸೌರ ಮಂಡಲ ಮಾದರಿಗೆ, ಮೂರನೇ ಬಹುಮಾನವನ್ನು ಜೀವಂತ ಮತ್ತು ಸಂದೀಪನಿಗೆ ನೀಡಿದರು.
ಶಿಕ್ಷಕರಾದ ಶಿವಶಂಕರ್, ಶ್ರೀನಿವಾಸ್ ಯಾದವ್, ಸುನಿತಾ, ಶ್ವೇತಾ,ಅಂಗನವಾಡಿ ಶಿಕ್ಷಕಿ ಪದ್ಮಾವತಿ ಹಾಜರಿದ್ದರು.