Sidlaghatta : ಸಾಹಿತಿಗಳು, ಕವಿಗಳು, ಬರಹಗಾರರು, ರಂಗ ಭೂಮಿ ಕಲಾವಿದರು, ಚಲನಚಿತ್ರ ನಟರು, ಕನ್ನಡಪರ ಸಂಘಟನಾ ಹೋರಾಟಗಾರರು, ರೈತರು, ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗಾಗಿ ಶ್ರಮಿಸಿದ್ದಾರೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕೆಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ತಾಲ್ಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಲೋರ್ಕಾಪಣೆ ಮಾಡಿ ಸಮ್ಮೇಳನದ ಯಶಸಿಗೆ ಶುಭ ಹಾರೈಸಿ ಅವರು ಮಾತನಾಡಿದರು.
ಡಿ.12 ರಂದು ಅಪ್ಪೇಗೌಡನಹಳ್ಳಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಆವರಣದಲ್ಲಿ ನಡೆಯುವ 9 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು 9 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೊಟ್ಟ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಆಯೋಜಿಸಲಿದೆ. ಇದು ವಿಶೇಷವಾದದ್ದು. ಕನ್ನಡದ ಹಬ್ಬದ ರೀತಿಯಲ್ಲಿ ನಾವು ಸಮ್ಮೇಳನವನ್ನು ಆಚರಿಸೋಣ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಇಡೀ ಜಿಲ್ಲೆಯಲ್ಲಿಯೇ ಸಾಹಿತ್ಯ ಸಮ್ಮೇಳನಕ್ಕೆ ಲಾಂಛನವನ್ನು ಮಾಡಿಸಿರುವ ಪ್ರಪ್ರಥಮ ತಾಲ್ಲೂಕು ಶಿಡ್ಲಘಟ್ಟವಾಗಿದೆ. ಅಲ್ಲದೇ ಸಮ್ಮೇಳವನ್ನು ಆಯೋಜಿಸುವುದರಲ್ಲಿಯೂ ನಾವು ಪ್ರಥಮರಾಗಿದ್ದೇವೆ. ಲಾಂಛನದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ನಕ್ಷೆ ಇದೆ, ರೇಷ್ಮೆ ಗುಡಿನ ಮೂಟೆ ಹೊತ್ತು ತರುವ ಕಾರ್ಮಿಕರ ಮತ್ತು ಹೈನುಗಾರಿಕೆಯನ್ನು ಪ್ರತಿನಿಧಿಸುವ ಹಸುವಿನ ಚಿತ್ರಗಳಿವೆ. ಪುಸ್ತಕ, ಅರಿಶಿನ ಕುಂಕುಮ ಬಣ್ಣದ ಕರ್ನಾಟಕದ ಭೂಪಟ, ಹಾಗೂ ಸಾಹಿತ್ಯ ಪರಿಷತ್ತಿನ ಲಾಂಛನವನ್ನೂ ಅಡಕ ಮಾಡಲಾಗಿದೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಾ.ಮಂಜುನಾಯಕ್, ಸಿಡಿಪಿಒ ನವತಾಜ್, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್, ಡಾಲ್ಫಿನ್ ವಿದ್ಯಾಸಂಸ್ಥೆಯ ಅಶೋಕ್, ಭಾಸ್ಕರ್ ಗೌಡ, ದೇವರಾಜ್ ಹಾಜರಿದ್ದರು.