Sidlaghatta : ಕನಕದಾಸರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ, ಸಮಾಜದಲ್ಲಿರುವ ಮೌಢ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದಂತಹ ಕನಕದಾಸರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ರೂಢಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಕನಕದಾಸರ ಜಯಂತಿ ಅಂಗವಾಗಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಇದೇ ನ 30 ರ ಗುರುವಾರದಂದು ನಡೆಯುವ ತಾಲ್ಲೂಕು ಮಟ್ಟದ ಕನಕದಾಸರ ಜಯಂತಿಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬರುವಂತಹ ಪಲ್ಲಕ್ಕಿಗಳಿಗೆ ಹಣವನ್ನು ದುಂದು ವೆಚ್ಚ ಮಾಡುವ ಬದಲಿಗೆ ಆ ಹಣವನ್ನು ಸಮುದಾಯದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಪುಸ್ತಕಗಳನ್ನು ವಿತರಣೆ ಮಾಡಿದಲ್ಲಿ ಕನಕದಾಸರ ಜಯಂತಿಗೆ ಅರ್ಥವಿರುತ್ತದೆ ಎಂದು ಸಲಹೆ ನೀಡಿದರು.
ತಾಲ್ಲೂಕು ಆಡಳಿತದ ವತಿಯಿಂದ ಅಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಕಚೇರಿ ಸಬಾಂಗಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 12 ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ನಂತರ ಪಲ್ಲಕ್ಕಿಗಳ ಮೆರವಣಿಗೆಗೆ ಚಾಲನೆ ನೀಡಲಾಗುವುದು, ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕೀಲು ಕುದುರೆ, ಗಾರಡಿ ಗೊಂಬೆ ಇನ್ನಿತರೆ ಕಲಾತಂಡಗಳು ಕಲಾ ಪ್ರದರ್ಶನವನ್ನು ನೀಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಓ ಜಿ.ಮುನಿರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ವೆಂಕಟೇಶಮೂರ್ತಿ, ಕುರುಬ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ, ಸಮುದಾಯದ ಮುಖಂಡರಾದ ಡಾಲ್ಫಿನ್ ನಾಗರಾಜು, ರಾಮಚಂದ್ರಪ್ಪ, ಗಣೇಶಪ್ಪ, ರಾಮಣ್ಣ, ಮುನಿನಂಜಪ್ಪ, ಹಿತ್ತಲಹಳ್ಳಿ ವೆಂಕಟೇಶ್, ಕನ್ನಪನಹಳ್ಳಿ ನಾರಾಯಣಸ್ವಾಮಿ, ಮುನೇಗೌಡ, ವೆಂಕಟೇಶ್ ಹಾಜರಿದ್ದರು.