Ankatatti, Sidlaghatta : ಲೌಕಿಕ ಪ್ರಪಂಚದಲ್ಲಿ ಮುಳುಗಿರುವವರಿಗೆ ಕೈವಾರ ತಾತಯ್ಯನವರ ಬೋಧನೆಯ ವಾಕ್ಯಗಳು ಕಠಿಣವೆನಿಸಬಹುದು. ಆದರೆ ಆ ವಾಕ್ಯಗಳು ಸಂಪೂರ್ಣವಾದ ಸತ್ಯದಿಂದ ಕೂಡಿವೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಅಂಕತಟ್ಟಿ ಗೇಟ್ ಬಳಿ ಇರುವ ತೋಟಗಾರಿಕೆ ಸಮಾಲೋಚಕ ತಜ್ಞ ಸಂತೆ ನಾರಾಯಣಸ್ವಾಮಿ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ಕೈವಾರ ತಾತಯ್ಯನವರ ಗುರುಪೂಜೆಯಲ್ಲಿ ಭಾಗವಹಿಸಿ ಆತ್ಮಬೋಧಾಮೃತ ಪ್ರವಚನವನ್ನು ನೀಡಿ ಅವರು ಮಾತನಾಡಿದರು.
ಸನಾತನ ಗುರು-ಶಿಷ್ಯ ಪರಂಪರೆಯು ಬಹಳ ವಿಶೇಷತೆಗಳಿಂದ ಕೂಡಿದೆ. ಪರಿಪೂರ್ಣ ಜ್ಞಾನದ ಸಂಪತ್ತಾದ ಗುರುವಿನ ಅನುಗ್ರಹವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಮೋಕ್ಷಮಾರ್ಗದ ಮೂಲವನ್ನು ತೋರಿಸಬಹುದು ಆದರೆ, ಅಂತಹ ಬದ್ಧತೆ, ವಿಧೇಯತೆಯಿಂದ ಕೂಡಿರುವ ಶಿಷ್ಯನು ಕಾಣಸಿಗುವುದು ದುರ್ಲಭ ಎಂದಿದ್ದಾರೆ ಕೈವಾರ ತಾತಯ್ಯನವರು ಎಂದರು.
ಈ ಸತ್ಯವು ಅರಿವಾಗಬೇಕಾದರೆ ಗುರುವಿನ ಕೃಪೆಯಿರುವ, ಗುರುಸೂತ್ರದಲ್ಲಿರುವ ಗುಣವಂತನಿಗೆ ಮಾತ್ರ ಅರ್ಥವಾಗುತ್ತದೆ. ತಾತಯ್ಯನವರು ಹೇಳಿರುವ ವಿದ್ಯೆ ಬ್ರಹ್ಮವಿದ್ಯೆ. ಜೀವನು ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರದಲ್ಲಿ ಸೇರಿ ಪರಮಾತ್ಮನಲ್ಲಿ ಐಕ್ಯವಾಗುವ ವಿದ್ಯೆಯೇ ಬ್ರಹ್ಮವಿದ್ಯೆ. ಇಂತಹ ಬ್ರಹ್ಮವಿದ್ಯೆಯನ್ನು ಸಾಧನೆ ಮಾಡುವ ಶಿಷ್ಯನು ಕಾಣುತ್ತಿಲ್ಲ ಎಂದಿದ್ದಾರೆ ತಾತಯ್ಯನವರು. ಅಧ್ಯಾತ್ಮ ಸಾಧನೆಗೆ ಅಂತರಂಗಶುದ್ಧಿ ಬಹಳ ಮುಖ್ಯವಾದುದು ಎಂದರು.
ಮಾನವ ಜನ್ಮದಲ್ಲಿ ಮೋಕ್ಷವನ್ನು ಪಡೆದುಕೊಳ್ಳದಿದ್ದರೆ ಬೇರೆ ಯಾವ ಜನ್ಮದಲ್ಲೂ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸತ್ಯವನ್ನು ತಾತಯ್ಯನವರು ಘಂಟಾಘೋಷವಾಗಿ ಹೇಳಿದ್ದಾರೆ. ಈಗ ಸರಿಯಾದ ಸಮಯ ಬಂದಿದೆ, ಈಗ ನಿನ್ನನ್ನು ನೀನು ಅರಿತುಕೊಂಡು ಮೋಕ್ಷವನ್ನು ಸಂಪಾದಿಸಿಕೋ ಎಂದಿದ್ದಾರೆ. ಮಾನವರಾಗಿ ಹುಟ್ಟಿದ ಮೇಲೆ ಮೋಕ್ಷಕ್ಕೆ ಬೇಕಾದ ಬುತ್ತಿಯನ್ನು ಇಂದಿನಿಂದಲೇ ಸಿದ್ಧಪಡಿಸಿಕೊಂಡು ಜಾಗೃತರಾಗೋಣ ಎಂದರು.
ಕಾರ್ಯಕ್ರಮದಲ್ಲಿ ಸದ್ಗುರು ತಾತಯ್ಯನವರ ವಿಗ್ರಹಮೂರ್ತಿಯನ್ನು ಶ್ರೀಕ್ಷೇತ್ರ ಕೈವಾರದಿಂದ ತರಲಾಗಿತ್ತು. ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಲಂಕಾರ, ಅಷ್ಟಾವಧಾನ ಸೇವೆಯನ್ನು ಸಲ್ಲಿಸಲಾಯಿತು. ಮಹಾಮಂಗಳಾರತಿಯನ್ನು ಬೆಳಗಲಾಯಿತು.
ಗಾಯಕ ಮಹತ್ಮಾಂಜನೇಯ ತಂಡದವರು ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಜಯಪುರ ಪುರಸಭೆಯ ಅಧ್ಯಕ್ಷೆ ವಿಮಲಾ ಬಸವರಾಜ್, ನಿವೃತ್ತ ಮೇಜರ್ ಜನರಲ್ ಡಾ.ಟಿ.ನಾಗರಾಜ್, ಎಸ್.ಎನ್.ವೆಂಕಟೇಶ್, ವಕೀಲ ಎಸ್.ಎನ್.ಜಯರಾಮ್, ಪ್ರಗತಿಪರ ರೈತ ಎನ್.ಸಿ.ಪಟೇಲ್, ಎಚ್.ಎಂ.ಕೆ.ಪಿ ರಾಷ್ಟ್ರೀಯ ಅಧ್ಯಕ್ಷ ಎಲ್.ಕಾಳಪ್ಪ, ವಾರ್ತಾ ಇಲಾಖೆ ನಿವೃತ್ತ ಅಧಿಕಾರಿ ಜಗನ್ನಾಥ್ ಪ್ರಕಾಶ್, ಶ್ರೀಕೃಷ್ಣ ಯತೀಂದ್ರ ಸತ್ಸಂಗದ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ, ಜೆಸಿ ಸಂಘದ ಪದಾಧಿಕಾರಿಗಳು, ವಕೀಲರ ಸಂಘದ ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.