Sidlaghatta : ಜೆಡಿಎಸ್ ಪಕ್ಷದ ಬಗ್ಗೆಯಾಗಲಿ, ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಕಂದಾಯ ಸಚಿವ ಆರ್.ಅಶೋಕ್ ಅವರಿಗಾಗಲಿ ಇಲ್ಲವೇ ಬಿಜೆಪಿಯ ಯಾರಿಗೂ ಇಲ್ಲ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಅವರು ಕಂದಾಯ ಸಚಿವ ಆರ್.ಅಶೋಕ್ ಅವರ ಹೇಳಿಕೆಯನ್ನು ಖಂಡಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲೂ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಅವರು ಮನೆ ಮನೆಗೂ ಭೇಟಿ ನೀಡಿ ಜೆಡಿಎಸ್‌ನ ಪಂಚರತ್ನ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಡ್ಲಘಟ್ಟದಲ್ಲಿನ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಬಗ್ಗೆ ಸಚಿವ ಆರ್.ಅಶೋಕ್ ಕೀಳಾಗಿ ಮಾತನಾಡಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿದರು.
ಕೊರೊನಾ ಸಮಯದಲ್ಲಿ ಹೆಣಗಳ ಮೇಲೆ ರಾಜಕೀಯ ಮಾಡಿ 20 ಸಾವಿರ ಕೋಟಿಯಷ್ಟು ಅವ್ಯವಹಾರ ಮಾಡಿದ ಬಿಜೆಪಿಗೆ ಜೆಡಿಎಸ್ ಪಕ್ಷದ ಬಗ್ಗೆಯಾಗಲಿ ಇಲ್ಲವೇ ನಮ್ಮ ನಾಯಕರಾದ ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆಯೆ ಇಲ್ಲ ಎಂದು ಹೇಳಿದರು.
ಈ ದೇಶದಲ್ಲಿ ರೈತರ ಬಗ್ಗೆ, ಜನ ಸಾಮಾನ್ಯರ ಬಗ್ಗೆ, ಮಹಿಳೆಯರು, ಯುವಕರು ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸುವ ಏಕೈಕ ಪಕ್ಷ ಜೆಡಿಎಸ್ ಆಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಯಿಂದ ನಾವು ಏನನ್ನೂ ಕಲಿಯಬೇಕಿಲ್ಲ ಮತ್ತು ಅವರು ನಮ್ಮ ಬಗ್ಗೆ ಮಾತನಾಡುವ ನೈತಿಕತೆಯೂ ಬಿಜೆಪಿಯ ಆರ್.ಅಶೋಕ್ ಸೇರಿದಂತೆ ಯಾರಿಗೂ ಇಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜೋಡೆತ್ತುಗಳಾಗಿದ್ದವರು ಇದೀಗ ಕಳ್ಳೆತ್ತುಗಳಾಗಿದ್ದಾರೆ ಎಂದಿರುವ ಆರ್.ಅಶೋಕ್ ಅವರ ಹೇಳಿಕೆಯನ್ನು ಖಂಡಿಸಿದ ಬಿ.ಎನ್.ರವಿಕುಮಾರ್ , ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರು ಈಗಲೂ ಕಂದಾಯ ಸಚಿವರಾಗಿದ್ದು, ಕಂದಾಯ ಇಲಾಖೆಯಲ್ಲಿ ಹಣ ಇಲ್ಲದೆ ಕಡತಗಳು ವಿಲೇವಾರಿಯಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಉಪ ವಿಭಾಗಾಕಾರಿ, ತಹಶೀಲ್ದಾರ್, ಕಂದಾಯ ನಿರೀಕ್ಷಕರು ವರ್ಗಾವಣೆ ಆದರೂ, ಸ್ಥಳ ನಿಯೋಜನೆಯಾದರೂ ಇಂತಿಷ್ಟ ಹಣ ಕಪ್ಪ ಕಾಣಿಕೆಯಾಗಿ ಸಲ್ಲಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳು ಜನ ಸಾಮಾನ್ಯರನ್ನು ಸುಲಿದು ತಿನ್ನುತ್ತಿದ್ದಾರೆ ಎಂದು ಆರೋಪಿಸಿದರು.
ತನ್ನ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಮೊದಲು ಅದನ್ನು ನಿಯಂತ್ರಿಸಿ, ರೈತರು ಹಾಗೂ ಜನ ಸಾಮಾನ್ಯರು ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಿ ಅಶೋಕ್ ಸಾಹೇಬರೆ ಆಮೇಲೆ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಿ ಎಂದರು.
2000 ಕೋಟಿ ಅವ್ಯವಹಾರ :
2013 ರಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆದಾಗ ನಮ್ಮ ಎರಡೂ ಜಿಲ್ಲೆಗಳಲ್ಲಿದ್ದ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅವರು ಸೇರಿ ಎಚ್.ಎನ್ ವ್ಯಾಲಿ ಮತ್ತು ಕೆ.ಸಿ ವ್ಯಾಲಿ ಯೋಜನೆಗಳು 650 ಕೋಟಿ ಇದ್ದದ್ದನ್ನು 980 ಕೋಟಿಗೆ ಹಾಗೂ 1050 ಕೋಟಿಗೆ ಏರಿಸಿದರು. ಈ ಎರಡೂ ಯೋಜನೆಗಳಿಗೆ ಬಳಕೆಯಾಗಿರುವುದು ಸುಮಾರು 2000 ಕೋಟಿ ರೂಗಳಷ್ಟು ಜನಸಾಮಾನ್ಯರ ತೆರಿಗೆ ಹಣವನ್ನು ಹಾಳು ಮಾಡಿದ್ದಾರೆ. ಇದರ ದುಷ್ಪರಿಣಾಮವನ್ನು ಈ ಭಾಗದ ಜನರು ಮುಂದಿನ ಹತ್ತು ವರ್ಷಗಳಲ್ಲಿ ಅನುಭವಿಸಬೇಕಾಗುತ್ತದೆ.
2015 ರಲ್ಲಿ ತಮಿಳುನಾಡು ಸರ್ಕಾರ ಈ ಎರಡು ಯೋಜನೆಗಳ ನೀರಿನ ವಿವಿಧ ವೈಜ್ಞಾನಿಕ ಪರೀಕ್ಷೆಗಳ ವರದಿಯನ್ನು ಸರ್ವೋಚ್ಛ ನ್ಯಾಯಾಲಯದ ಮುಂದಿಟ್ಟು ಈ ಕೆಟ್ಟ ನೀರನ್ನು ತಮ್ಮ ಭಾಗಕ್ಕೆ ಹರಿಯಲು ಬಿಡಬಾರದೆಂದು ಆದೇಶ ಹೊರಡಿಸಿದ್ದರು. ಸುಮಾರು 600 ಕೋಟಿಯಷ್ಟು ಹಣ ಹೊಡೆಯಲು ಇವರು ಎಚ್.ಎನ್ ವ್ಯಾಲಿ ಮತ್ತು ಕೆ.ಸಿ ವ್ಯಾಲಿ ನೀರನ್ನು ಬಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಿದ್ದ ಮಳೆಯಿಂದಾಗಿ ಈ ಕೆಟ್ಟ ನೀರಿನ ದುಷ್ಪರಿಣಾಮ ನಮ್ಮ ಜನರಿಗೆ ಆಗಿಲ್ಲ. ಭವಿಷ್ಯದಲ್ಲಿ ಈ ಕಲುಷಿತ ನೀರಿನಿಂದ ಬಹಳಷ್ಟು ತೊಂದರೆಗಳು ಆಗಲಿವೆ.
ಇಡಿ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ದೂರ ಇಡುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್ ಪಕ್ಷ ಎಂಬುದು ಮುಳುಗುತ್ತಿರುವ ಹಡಗು. ಆ ಪಕ್ಷದ ನಾಯಕರುಗಳು ತೆಗೆದುಕೊಂಡ ಕೆಟ್ಟ ನಿಧಾರಗಳೇ ಅದಕ್ಕೆ ಕಾರಣ. ಅವರ ಪಕ್ಷದವರೇ ಅವರ ಪಕ್ಷವನ್ನು ಮುಗಿಸುತ್ತಿದ್ದಾರೆ.
1500 ಕೋಟಿ ರೂಗಳ ಅನುದಾನ :
ನಾನು ಎಂ.ಎಲ್.ಎ ಆದರೆ ಈ ಕ್ಷೇತ್ರ ಅಭಿವೃದ್ಧಿ ಸಂಪೂರ್ಣ ಆಗುವುದಿಲ್ಲ. ಕುಮಾರಣ್ಣನವರು ಮುಖ್ಯಮಂತ್ರಿ ಆದಾಗ ಮಾತ್ರ ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಸಿಗುತ್ತವೆ. ಸುಮಾರು 1500 ಕೋಟಿ ರೂಗಳ ನಾಲ್ಕು ಯೋಜನೆಗಳನ್ನು ಈ ಕ್ಷೇತ್ರಕ್ಕೆ ತರಬೇಕೆಂದರೆ ರಾಜ್ಯದಲ್ಲಿ ನಮ್ಮ ಸರ್ಕಾರ ಇರಲೇಬೇಕು. ಶಿಕ್ಷಣ ಕ್ಷೇತ್ರ ಬಲಪಡಿಸಲು ಎಂಜಿನಿಯರಿಂಗ್ ಕಾಲೇಜು, ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು, ರಸ್ತೆ ಸಂಪರ್ಕ ಮತ್ತು ನಗರದ ಅಭಿವೃದ್ಧಿ ನಮ್ಮ ಮುಖ್ಯ ಆದ್ಯತೆಗಳಾಗಿವೆ.
JDS candidate Meluru Ravikumar condemns Revenue Minister R. Ashok’s derogatory remarks
Sidlaghatta : JDS candidate from the Sidlaghatta assembly constituency, Meluru BN Ravikumar, has slammed Revenue Minister R. Ashok for his recent comments about the JDS party, former Prime Minister Deve Gowda, and former CM Kumaraswamy. Ravikumar stated that neither R. Ashok nor anyone from the BJP has the moral authority to talk about the JDS party or its leaders.
While campaigning in the villages of the Sidlaghatta assembly constituency, Ravikumar highlighted JDS’s Pancharat plans and went on to condemn Minister R. Ashok’s derogatory remarks about the JDS party and Kumaraswamy during the BJP Sankalpa Yatra in Sidlaghatta.
Ravikumar defended his party and leaders, stating that JDS is the only party in the country that prioritizes farmers, common people, women, youth, and local issues. He further added that the BJP is a corrupt party, and no one, including R. Ashok, has the moral authority to criticize JDS.
Ravikumar also spoke about a 2000 crore misdemeanor, where the tax money of common people was used for the HN Valley and KC Valley projects by Srinivasapur MLA Ramesh Kumar and Chikkaballapur MLA Dr. Sudhakar. The ill effects of this project will be felt by the people of the region in the next ten years. The Tamil Nadu government submitted the report of various scientific tests of the water from these two projects before the Supreme Court in 2015 and ordered that this bad water not be allowed to flow to their part. However, the water of H.N Valley and K.C Valley was left to earn about 600 crores.
Ravikumar also criticized the Congress party, stating that it is a sinking ship due to bad decisions taken by the party’s leaders. He highlighted the need to keep national parties away in the state and asserted that only when HD Kumaraswamy becomes the Chief Minister will the complete development projects of their constituency get started. He emphasized that the JDS government must be in the state to bring four projects worth around Rs 1500 crore to this sector, including an engineering college to strengthen the education sector, clean drinking water to every village, road connectivity, and development of the city.