ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಂಗಮಕೋಟೆ ಗ್ರಾಮಪಂಚಾಯಿತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಡ್ಲಘಟ್ಟ, ಕರ್ನಾಟಕ ಜನಜೀವನ ಮಿಷನ್ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸಣ್ಣ ಜಲಮೂಲಗಳ ಪುನಶ್ಚೇತನ ಕಾರ್ಯಕ್ರಮದಡಿಯಲ್ಲಿ ಜಂಗಮಕೋಟೆಯ ಪುರಾತನವಾದ ತಿಮ್ಮೇಗೌಡ ಕಲ್ಯಾಣಿಯನ್ನು ಸ್ವಚ್ಚಗೊಳಿಸುವ ಕಾರ್ಯಕ್ಕೆ ಚಲನೆ ನೀಡಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನೋಮೇಶ್ ಕುಮಾರ್ ಮಾತನಾಡಿದರು.
ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ಪುನರುತ್ಥಾನ, ನೀರಿನ ಮರುಬಳಕೆ ಮತ್ತು ಬರಡಾದ ಜಲಮೂಲಗಳ ಪುನಶ್ಚೇತನ, ಕೊಳಗಳ ಪುನರ್ಭರ್ತಿ, ಜಲಕೋಶಗಳ ಅಭಿವೃದ್ಧಿ ಮತ್ತು ತೀವ್ರ ವೇಗದಲ್ಲಿ ಅರಣ್ಯ ಬೆಳೆಸುವ ಆಯಾಮಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಜಲ ಶಕ್ತಿ ಅಭಿಯಾನವನ್ನು ಜಾರಿಗೆ ತಂದಿದೆ ಎಂದು ಅವರು ತಿಳಿಸಿದರು.
ನೀರನ್ನು ರಕ್ಷಿಸುವ ಜಾಗೃತಿಯನ್ನು ಮತ್ತು ತ್ಯಾಜ್ಯ ನಿರ್ವಹಣೆ ಕುರಿತಾಗಿ ಜನರಲ್ಲಿ ಅರಿವು ಮೂಡಿಸಬೇಕಿದೆ. ನಮ್ಮ ಗ್ರಾಮಗಳಲ್ಲಿನ ಸಣ್ಣ ಜಲಮೂಲಗಳ ಪುನಶ್ಚೇತನವನ್ನು ಎಲ್ಲರೂ ಒಗ್ಗೂಡಿ ಮಾಡಿಕೊಳ್ಳಬೇಕು. ನಮ್ಮ ಗ್ರಾಮದಲ್ಲಿ ಬಿದ್ದ ಮಳೆ ನೀರು ನಮ್ಮಲ್ಲಿಯೇ ಇಂಗುವಂತೆ ನೋಡಿಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಪಿಡಿಒ ವಜ್ರೇಶ್ ಕುಮಾರ್, ಜಲಜೀವನ ಮಿಶನ್ ಸಂಸ್ಥೆಯ ಸದಸ್ಯರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಪ್ರಕಾಶ್, ಸಹ ಕಾರ್ಯದರ್ಶಿ ಮುನಿರಾಜು, ನವೋದಯ ಶಾಲೆಯ ಶ್ವೇತಾ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರ, ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.