ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಡಾ.ಬಾಬುಜಗಜೀವನರಾಂ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಬಾಬು ಜಗಜೀವನ್‌ರಾಂ ಅವರು ದೇಶದ ಉಪಪ್ರಧಾನಿಯಾಗಿ ಹಾಗೂ ವಿವಿಧ ಪ್ರಮುಖ ಹುದ್ದೆ ಅಲಂಕರಿಸಿ ಶೋಷಿತರ ಪರ ಹಾಗೂ ಸಮಾಜದಲ್ಲಿ ಜಾತಿ ಪದ್ದತಿಯನ್ನು ಹೋಗಲಾಡಿಸಲು ಹೋರಾಟ ನಡೆಸಿ ಸಮಾನತೆ ತರುವಲ್ಲಿ ಯಶಸ್ವಿಯಾದ ಮಹಾನ್ ಚೇತನವಾಗಿದ್ದರು. ಡಾ.ಬಾಬುಜಗಜೀವನ್‌ರಾಂ ಅವರನ್ನು ಕೇವಲ ಒಂದು ಸಮುದಾಯಕ್ಕಷ್ಟೇ ಸೀಮಿತಗೊಳಿಸದೇ ದೇಶದ ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ವಿದೇಶಗಳಿಂದ ಆಹಾರ ಧಾನ್ಯಗಳನ್ನು ರಪ್ತು ಮಾಡಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ದೇಶದಲ್ಲಿ ಹಸಿರು ಕ್ರಾಂತಿಯನ್ನು ಹುಟ್ಟುಹಾಕಿದ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಂ ಅವರ ದೂರದೃಷ್ಟಿಯಿಂದ ದೇಶದ ಎಲ್ಲಾ ವರ್ಗದ ಜನರು ಇಂದು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಮುನೀಂದ್ರ ಮಾತನಾಡಿ, “ಪ್ರತಿಯೊಂದು ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ 25 ಸಾವಿರ ರೂಗಳನ್ನು ನೀಡುತ್ತಿದೆ. ಆದರೆ ತಾಲ್ಲೂಕು ಆಡಳಿತ ಕನಿಷ್ಠ ಬ್ಯಾನರ್ ಕೂಡ ಮಾಡಿಸದೆ ಕಾಟಾಚರಕ್ಕೆ ಜಯಂತ್ಯುತ್ಸವವನ್ನು ಆಚರಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಬಿ.ಎಸ್.ರಾಜೀವ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಹಾಜರಿದ್ದರು.
