ಈಗಾಗಲೇ ಜಾರಿಯಲ್ಲಿರುವ ಜನತಾ ಕರ್ಫ್ಯೂ, ಸೋಮವಾರದಿಂದ ಜಾರಿಗೆ ಬರಬಹುದಾದ ಲಾಕ್‌ಡೌನ್‌ನ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕೊರೋನಾ ತಡೆಗೆ ಪೂರಕವಾದ ನಿಯಮಗಳು ಕಠಿಣವಾಗಿ ಜಾರಿಗೊಳಿಸುವ ಕುರಿತು ಜನರು, ವ್ಯಾಪಾರಸ್ಥರಲ್ಲಿ ಸಾಕಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಮ್ಮದೇವರಾಜು ತಿಳಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್‍ಸ್‌ಗಳಿಗೆ ಉಚಿತ ರಕ್ಷಣಾಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಅರುಣಕುಮಾರಿ ಮಾತನಾಡಿ, ಅನಗತ್ಯವಾಗಿ ಯಾರೂ ಸಹ ಬೀದಿಗಿಳಿಯಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎಲ್ಲೆಡೆ ತಪ್ಪದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸ್ ಮಾಡಿ ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಈಗಾಗಲೇ ಜೆ.ವೆಂಕಟಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಕೊರೋನಾ ಸಾವು ಸಂಭವಿಸಿದ್ದು ಸಕ್ರಿಯ ಕೇಸುಗಳಿವೆ. ಆ ನಿಟ್ಟಿನಲ್ಲಿ ಸೋಂಕು ತಡೆಗೆ ರಚಿಸಿರುವ ಗ್ರಾಮ ಟಾಸ್ಕ್‌ಫೋರ್‍ಸ್‌ನ ಸದಸ್ಯರು ಕ್ರಿಯಾಶೀಲರಾಗಿ ಸೋಮಕು ಹರಡದಂತೆ ಜಾಗೃತಿ ಮೂಡಿಸಲು ಕಾರ್ಯತತ್ಪರರಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ.ನಾರಾಯಣಸ್ವಾಮಿ ಮಾತನಾಡಿ, ಸೋಂಕುಲಕ್ಷಣಗಳು ಕಾಣಿಸಿಕೊಂಡರೆ ಪಂಚಾಯಿತಿ ಕೋವಿಡ್ ತಡೆ ತಂಡಗಳಿಗೆ ತಿಳಿಸಬೇಕು. ಸೋಂಕು ಹರಡದಂತೆ ಸಾರ್ವಜನಿಕರೂ ಸಹಕರಿಸಬೇಕು. ಅತ್ಯಗತ್ಯವಾಗಿ ಬೇಕಾದ ವಸ್ತುಗಳನ್ನು ಕೊಳ್ಳಲು ಕುಟುಂಬದ ಒಬ್ಬ ಸದಸ್ಯರು ಮಾತ್ರ ಹೋಗಿಬರಬೇಕು ಎಂದರು.
ಗ್ರಾಮ ಟಾಸ್ಕ್‌ಫೋರ್‍ಸ್‌ನ ಕೊರೋನಾ ವಾರಿಯರ್‍ಸ್‌ಗಳಿಗೆ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್, ರಕ್ಷಣಾ ಪರಿಕರಗಳನ್ನು ವಿತರಿಸಲಾಯಿತು.
ಗ್ರಾಮಪಂಚಾಯಿತಿ ಸದಸ್ಯ ನಾಗೇಶ್, ತಿರುಪಳಪ್ಪ, ಸುಗಟೂರು ಡಿ.ದೇವರಾಜು, ಎ.ಸತೀಶ್‌ಕುಮಾರ್, ಟಾಸ್ಕ್‌ಫೋರ್‍ಸ್‌ನ ಎಚ್.ಎಸ್.ರುದ್ರೇಶಮೂರ್ತಿ, ಪಿ.ಗೀತಾ, ವಿರೂಪಾಕ್ಷ, ಮುನಿರತ್ನ, ಪಂಚಾಯಿತಿ ಸಿಬ್ಬಂದಿ ಸುಪ್ರಜಾ, ಪ್ರವೀಣ್, ನಾರಾಯಣಸ್ವಾಮಿ, ಅಂಗನವಾಡಿಕಾರ್ಯರ್ತೆಯರು, ಆರೋಗ್ಯಕಾರ್ಯಕರ್ತರು, ವಾಟರ್‌ಮನ್‌ಗಳು ಹಾಜರಿದ್ದರು.