Sidlaghatta : ಆರೋಗ್ಯವಂತ ಸಮಾಜದ ನಿರ್ಮಾಣವಾಗಬೇಕಾದರೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರಗಳ ಸೇವನೆ ಅತ್ಯಗತ್ಯ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಯೋಡಿನ್ ಕೊರತೆ ನಿವಾರಣೆ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತಮವಾದ ಪೌಷ್ಟಿಕಾಂಶಗಳಿಲ್ಲದ ಆಹಾರಗಳ ಸೇವನೆಯಿಂದಾಗಿ ಹುಟ್ಟುವ ಮಕ್ಕಳ ದೈಹಿಕ ಬೆಳವಣಿಗೆಯಲ್ಲೂ ಬದಲಾವಣೆಗಳಾಗುವುದರ ಜೊತೆಗೆ, ಮಕ್ಕಳ ಬುದ್ಧಿಶಕ್ತಿ ವೃದ್ಧಿಸಲು ತೊಡಕುಂಟಾಗಲಿದೆ. ಆದ್ದರಿಂದ ಮಕ್ಕಳು ಹಾಗೂ ನಾಗರಿಕರು ಪೌಷ್ಟಿಕಾಂಶಗಳುಳ್ಳ ಸಾಕಷ್ಟು ಆಹಾರಗಳನ್ನು ಸೇವಿಸಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ್‌ಕುಮಾರ್ ಮಾತನಾಡಿ, ನೀರು ಮತ್ತು ಆಹಾರದಲ್ಲಿನ ಅಯೋಡಿನ್ ಕೊರತೆ, ಅಯೋಡಿನ್ ಕೊರತೆಯಿಂದಾಗುವ ಖಾಯಿಲೆಗಳಿಗೆ ಮುಖ್ಯ ಕಾರಣವಾಗಿದೆ. ಥೈರಾಯಿಡ್ ಹಾರ್ಮೋನ್ ಗಳ ರಚನೆಗಾಗಿ ಅಯೋಡಿನ್ ಬೇಕಾಗುತ್ತದೆ. ಅಯೋಡಿನ್ ಕೊರತೆಯಿಂದ ಗಾಯ್ಟರ್ (ಗಂಟಲುವಾಳು) ಬರುತ್ತದೆ ಥೈರಾಯಿಡ್ ಗ್ರಂಥಿಯ ಊತ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ ಎಂದರು.
ಅಯೋಡೈಸ್ಡ್ ಉಪ್ಪಿನ ಬಳಕೆಯಿಂದ ಸಮರ್ಪಕ ಅಯೋಡಿನ್ ಸೇವನೆಯನ್ನು ಖಾತ್ರಿಪಡಿಸುತ್ತದೆ. ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಆಹಾರವೂ ಉತ್ತಮ ಆರೋಗ್ಯ ನಿರ್ವಹಣೆಗಾಗಿ ಅತ್ಯವಶ್ಯಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ಮುಖಂಡರಾದ ಕಿಶನ್(ನಂದು), ಶ್ರೀನಾಥ್, ನವೀನ್ ಹಾಜರಿದ್ದರು.