Sidlaghatta : ರಾಜ್ಯದಲ್ಲಿನ ಸಮಸ್ತ ಛಾಯಾಗ್ರಾಹಕರ ವೃತ್ತಿಭದ್ರತೆ, ಕ್ಷೇಮಾಭಿವೃದ್ಧಿ, ಜೀವನ ಭದ್ರತೆ ಹಾಗೂ ನಿರಂತರ ಕಲಿಕೆಗಾಗಿ ಕೆ.ಪಿ.ಎ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಛಾಯಾಗ್ರಾಹಕರ ಸಂಘದ (KPA) ರಾಜ್ಯ ಉಪಾಧ್ಯಕ್ಷ ಎಚ್.ಎಸ್.ನಾಗೇಶ್ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘದ ತಾಲ್ಲೂಕು ಘಟಕದ ಸಭೆಯಲ್ಲಿ ಅವರು ಮಾತನಾಡಿದರು.
ಛಾಯಾಗ್ರಾಹಕರಲ್ಲಿ ಬಹುತೇಕರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ರಾಜ್ಯ ಛಾಯಾಗ್ರಾಹಕರ ಸಂಘವು ಸಂಘಟಿತ ಹೋರಾಟದ ಮೂಲಕ ಛಾಯಾಗ್ರಾಹಕರ ಹಿತರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಪ್ರತಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಘದ ಬಲವರ್ಧನೆ ಆಗಬೇಕು. ಸಂಘಿಕವಾಗಿದ್ದಾಗ ಮಾತ್ರ ಎಲ್ಲರ ಕ್ಷೇಮಾಭಿವೃದ್ಧಿ ಸಾಧ್ಯವಾಗುತ್ತದೆ. ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗಟ್ಟಿನಿಂದ ಇರಿ. ಸದಸ್ಯರು ತಪ್ಪದೆ ಸದಸ್ಯತ್ವ ನೋಂದಣಿ ಹಾಗೂ ನವೀಕರಣ ಮಾಡಿಸಬೇಕು ಎಂದು ಹೇಳಿದರು.
ವೃತ್ತಿ ಹಾಗೂ ಜೀವನ ಭದ್ರತೆ ಜೊತೆಗೆ ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಕ್ಯಾಮೆರಾ ಬಳಸುವ ಕೌಶಲದ ಕುರಿತ ತರಬೇತಿಯ ಅಗತ್ಯವಿದೆ. ಕೋವಿಡ್ ಸಮಯದಲ್ಲಿ ಛಾಯಾಗ್ರಾಹಕರ ಬದುಕು ಸಂಪೂರ್ಣ ಅತಂತ್ರವಾಗಿತ್ತು. ಇಂದಿಗೂ ಪರಿಸ್ಥಿತಿ ಸುಧಾರಿಸಿಲ್ಲ. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ. ಅಲ್ಲಿಯವರೆಗೂ ಶಾಂತಿಯುತ ಮಾರ್ಗದಲ್ಲೇ ಹೋರಾಟ ನಡೆಸೋಣ ಎಂದು ಹೇಳಿದರು.
ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಹತ್ತನೇ ಸಮಾವೇಶವನ್ನು ಆಗಸ್ಟ್ 8 ರಂದು ಬೆಂಗಳೂರಿನ ಮಂತ್ರಿ ಮಾಲ್ ಎದುರಿನ ದಿ.ಗುಂಡೂರಾವ್ ಕ್ರೀಡಾ ಸಂಕೀರ್ಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲಾ ಸದಸ್ಯರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.
ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಸಂಘಗಳ ಸಹಯೋಗದಲ್ಲಿ ಇದೇ ಸೆಪ್ಟೆಂಬರ್ 7 ರಿಂದ 9 ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ “ಡಿಜಿ ಇಮೇಜ್ ನಮ್ಮ ಇಮೇಜ್” ಎಂಬ 9 ನೇ ಅಂತರರಾಷ್ಟ್ರೀಯ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು. ದಕ್ಷಿಣ ಭಾರತದ ಅತಿ ದೊಡ್ಡ ವಸ್ತು ಪ್ರದರ್ಶನ ಇದಾಗಿದ್ದು, ಛಾಯಾಗ್ರಾಹಕರ ಬೇಡಿಕೆಗಳ ಈಡೇರಿಕೆಗೆ ಹೋರಾಟ, ರಾಜ್ಯ ಮಟ್ಟದ ಬೃಹತ್ ಸಮಾವೇಶ, ತಂತ್ರಜ್ಞಾನದ ಕಾರ್ಯಾಗಾರ ಹೀಗೆ ಹಲವು ಕಾರ್ಯಕ್ರಮಗಳು ಇದರಲ್ಲಿ ಒಳಗೊಂಡಿದೆ. ಈ ಪ್ರದರ್ಶನ ನಾಡಿನ ಛಾಯಾಗ್ರಾಹಕರ ಒಗ್ಗಟ್ಟು ಹಾಗೂ ಸ್ವಾಭಿಮಾನಕ್ಕೆ ಸಾಕ್ಷಿಯಾಗಲಿದೆ ಎಂದರು.
ಕೆಪಿಎ ರಾಜ್ಯ ಉಪಾಧ್ಯಕ್ಷ ಎಚ್.ಎಸ್.ನಾಗೇಶ್, ರಾಜ್ಯಸಂಘದ ಉಮಾಶಂಕರ್, ಜಿಲ್ಲಾ ಅಧ್ಯಕ್ಷ ಜೋಸೆಫ್, ಖಜಾಂಚಿ ಗಿರೀಶ್ ಆರಾಧ್ಯ, ಕೆಪಿಎ ನಿರ್ದೇಶಕರಾದ ನಾರಾಯಣಸ್ವಾಮಿ, ಗೌರಿ ಶಂಕರ್, ಸದಸ್ಯರಾದ ಛಾಯಾ ರಮೇಶ್, ಮಲ್ಲಿಕಾರ್ಜುನ್, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಮೇಘನಾ ಶ್ರೀನಿವಾಸ್, ಸಂಚಾಲಕ ಬಾಬು, ಮೂರ್ತಿ, ಎಚ್ ಕ್ರಾಸ್ ವೆಂಕಟೇಶ್, ರಾಮಕೃಷ್ಣ, ಮುನಿಕೃಷ್ಣ, ವಿಶ್ವ, ವೆಂಕಟರೆಡ್ಡಿ, ಗೋವಿಂದ, ಶ್ರೀನಿವಾಸ್ ಹಾಜರಿದ್ದರು.