ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಶಾಲೆಯ ಆವರಣದಲ್ಲಿ ಕರ್ನಾಟಕ ವಿಕಲರಚೇತನ ಸಂಸ್ಥೆಯ ಜಿಲ್ಲಾ ಘಟಕ ಹಾಗೂ ಕಾನೂನು ಸೇವಾ ಪ್ರಾಧಿಕಾರ ಶುಕ್ರವಾರ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಅವರು ಮಾತನಾಡಿದರು.
ವಿಶೇಷಚೇತನರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ವಿಕಲಚೇತನರಿಗೆ ಕೇವಲ ಪ್ರೀತಿ, ಅನುಕಂಪ ತೊರದೇ ಅವಕಾಶ ನೀಡಬೇಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಿಕಲಚೇತನರಿಗಾಗಿ ಉಚಿತ ಕಾನೂನು ಅರಿವು ಮತ್ತು ನೆರವು ನೀಡಲಾಗುವುದು. ವಿಕಲಚೇತನರಿಗೆ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಸಿಗುವಂತಾಗಲು ಪ್ರಾಧಿಕಾರದಿಂದ ಪ್ರಯತ್ನಿಸಲಾಗುವುದು. ವಿಕಲಚೇತನರು ಯಾವುದೇ ರೀತಿಯ ಕಾನೂನು ಸಮಸ್ಯೆಗಳಿದ್ದಲ್ಲಿ ಪ್ರಾಧಿಕಾರಕ್ಕೆ ಭೇಟಿ ನೀಡಬೇಕು ಎಂದು ತಿಳಿಸಿದರು.
ಕರ್ನಾಟಕ ವಿಕಲರಚೇತನ ಸಂಸ್ಥೆ ಕಾರ್ಯದರ್ಶಿ ಕಿರಣ್ ನಾಯಕ್ ಮಾತನಾಡಿ, ಕರ್ನಾಟಕ ವಿಕಲರಚೇತನ ಸಂಸ್ಥೆ 2012 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾರಂಭವಾಯಿತು. ನಮ್ಮಲ್ಲಿ 42 ಮಂದಿ ಸ್ವಯಂಸೇವಕರ ತಂಡವಿದ್ದು, ಗ್ರಾಮಾಂತರ ಮಟ್ಟದಲ್ಲಿಯೂ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಆನೂರು ಗ್ರಾಮದಲ್ಲಿ 34 ಮಂದಿ ಅಂಗವೈಕಲ್ಯವುಳ್ಳವರು ಇದ್ದಾರೆ. ಅವರಿಗೆ ಎಲ್ಲಾ ರೀತಿಯ ನೆರವು ಸೌಲಭ್ಯ ಸಿಗಲಿ ಎಂಬ ಉದ್ದೇಶದಿಂದ ಇಲ್ಲಿಯೇ ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಸುಮಾರು 25 ಸಾವಿರ ಮಂದಿ ವಿವಿಧ ರೀತಿಯ ಅಂಗವೈಕಲ್ಯವನ್ನು ಹೊಂದಿರುವವರು ನಮ್ಮ ಜಿಲ್ಲೆಯಲ್ಲಿದ್ದಾರೆ. ಅವರಿಗೆ ಸಾಧ್ಯವಾದಷ್ಟೂ ನೆರವು ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಮಟ್ಟದಲ್ಲಿ ಅಂಗವಿಕಲರಿಗೆ ಅವರ ಹಕ್ಕುಗಳು, ಸರ್ಕಾರದ ನೆರವುಗಳು, ಕಾನೂನಿನ ನೆರವಿನ ಬಗ್ಗೆ ತಿಳುವಳಿಕೆ ಸಿಗಬೇಕಿದೆ. ಅದಕ್ಕಾಗಿ ನ್ಯಾಯಧೀಶರು, ವಕೀಲರು ಸಹಕರಿಸಿದ್ದಾರೆ ಎಂದರು.
ವಕೀಲರಾದ ಮಂಜುನಾಥರೆಡ್ಡಿ, ಸೌಜನ್ಯ ಗಾಂಧಿ, ಕರ್ನಾಟಕ ವಿಕಲರಚೇತನ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ಸುಬ್ರಮಣ್ಯಂ, ಮುರಳೀಧರ್, ಕೆ.ಸಿ.ಮಮತಾ, ಸುಶೀಲಮ್ಮ, ಮಂಜುನಾಥ, ಲಕ್ಷ್ಮಿ, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ, ಮುಖ್ಯ ಶಿಕ್ಷಕ ಪ್ರಭಾಕರ್ ಹಾಜರಿದ್ದರು.