Sidlaghatta : ಮತದಾರನನ್ನು ಸೆಳೆಯಲು ತಾಲ್ಲೂಕಿನಲ್ಲಿ ಅಧಿಕಾರಿಗಳು ವಿವಿಧ ರೀತಿಯ ಹಾಗೂ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ರೇಷ್ಮೆ ಊರೆಂದು ಪ್ರಸಿದ್ಧವಾದ ಶಿಡ್ಲಘಟ್ಟದಲ್ಲಿ ಮತದಾರರ ಮತದಾನ ಹೆಚ್ಚು ಮಾಡಲು ಸ್ವೀಪ್ ಸಮಿತಿ ಸಜ್ಜಾಗಿದ್ದು, ನಗರದಲ್ಲಿರುವ ನೂರು ವರ್ಷಕ್ಕೂ ಹಿಂದಿನದ್ದು ಮತ್ತು ಪಾರಂಪರಿಕೆ ಕಟ್ಟಡವೆಂದೇ ಹೆಸರಾದ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯ ಕಟ್ಟಡವನ್ನು “ರೇಷ್ಮೆ” ಮತಗಟ್ಟೆ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ.
ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿರುವ ಈ ಪಾರಂಪರಿಕ ಹೆಂಚಿನ ಕಟ್ಟಡಕ್ಕೆ ಬಣ್ಣ ಬಳಿದು ಸಿಂಗರಿಸಲಾಗಿದ್ದು, ಗೋಡೆಗಳ ಮೇಲೆ ರೇಷ್ಮೆಯ ವಿವಿಧ ಹಂತಗಳ ಚಿತ್ರಗಳನ್ನು ರಚಿಸಲಾಗಿದೆ. ಹಿಪ್ಪುನೇರಳೆ ಸೊಪ್ಪು, ರೇಷ್ಮೆ ಪತಂಗ, ಮೊಟ್ಟೆ, ಚಾಕಿ, ರೇಷ್ಮೆ ಹುಳು, ರೇಷ್ಮೆ ಗೂಡು, ಕಚ್ಚಾ ರೇಷ್ಮೆ, ಹುರಿಯಾದ ರೇಷ್ಮೆ, ರೇಷ್ಮೆ ಬಟ್ಟೆ, ರೇಷ್ಮೆ ಗೂಡಿನಿಂದ ತಯಾರಾದ ಅಲಂಕಾರಿಕ ವಸ್ತುಗಳು ಎಲ್ಲವನ್ನೂ ಪ್ರದರ್ಶಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ರೇಷ್ಮೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆಯೂ ಇಲ್ಲಿ ಮಾಹಿತಿ ಸಿಗಲಿದೆ.
“ರೇಷ್ಮೆ” ಮತಗಟ್ಟೆ ಕೇಂದ್ರಕ್ಕೆ ಚುನಾವಣಾಧಿಕಾರಿ ಜಾವೀದಾ ನಸೀಮಾ ಖಾನಂ ಭೇಟಿ ನೀಡಿ ಸಿದ್ದತೆಗಳ ಬಗ್ಗೆ ಪರಿಶೀಲಿಸಿ ಮಾತನಾಡಿ, “ಶಿಡ್ಲಘಟ್ಟ ರೇಷ್ಮೆಗೆ ಹೆಸರುವಾಸಿ. ಈ ನಮ್ಮ ಹೆಮ್ಮೆಯ ರೇಷ್ಮೆಯನ್ನು ಪ್ರದರ್ಶಿಸುವ ಮೂಲಕ ಮತಗಟ್ಟೆ ಕೇಂದ್ರವನ್ನು ವಿಶಿಷ್ಟವಾಗಿ ರೂಪಿಸಲಾಗುತ್ತಿದೆ. ಇದಕ್ಕಾಗಿ ನಾವು ರೇಷ್ಮೆ ಇಲಾಖೆಯ ನೂರು ವರ್ಷಕ್ಕೂ ಹಳೆಯದಾದ ಕಟ್ಟಡವನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಚಿಟ್ಟೆಯಿಂದ ಬಟ್ಟೆಯವರೆಗೂ ರೇಷ್ಮೆಯ ವಿವಿಧ ಹಂತಗಳನ್ನು ಮತಗಟ್ಟೆ ಕೇಂದ್ರದ ಮುಂಭಾಗ ಪ್ರದರ್ಶಿಸಲಾಗುವುದು. ರೇಷ್ಮೆ ಗೂಡಿನಿಂದ ತಯಾರಿಸುವ ಹೂಗುಚ್ಛ, ಹಾರಗಳು ಮುಂತಾದ ಅಲಂಕಾರಿಕ ವಸ್ತುಗಳ ಪ್ರದರ್ಶನವೂ ಇರಲಿದೆ” ಎಂದು ವಿವರಿಸಿದರು.
ಮತದಾನವನ್ನು ಹಬ್ಬದಂತೆ ಆಚರಿಸಬೇಕಿದೆ. ನಮ್ಮ ಹೆಮ್ಮೆಯ ಪ್ರತೀಕವಾದ ರೇಷ್ಮೆಯ ಪ್ರದರ್ಶನದ ಮೂಲಕ ನಮ್ಮ ವಿಶಿಷ್ಟತೆಯನ್ನು ತೋರಿಸುತ್ತಾ, ಮತದಾನವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ. ನಗರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ಆಗಿರುವ ಮತಗಟ್ಟೆಗಳನ್ನು ಗುರ್ತಿಸಿ ಅವುಗಳಲ್ಲಿ ಈ ಭಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವಂತೆ ಅಗತ್ಯವಾದ ಎಲ್ಲ ರೀತಿಯ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ಶಿಡ್ಲಘಟ್ಟ ನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾರ್ಥನಗರದ ಸರ್ಕಾರಿ ಶಾಲೆಗಳಲ್ಲಿ ಸಖಿ ಮತಗಟ್ಟೆಗಳನ್ನು ಹಾಗೂ ಉಲ್ಲೂರುಪೇಟೆಯ ಸರ್ಕಾರಿ ಶಾಲೆಯಲ್ಲಿ ವಿಕಲಚೇತನ ಮತದಾರ ಸ್ನೇಹಿ ಮತಗಟ್ಟೆಯನ್ನು ಮಾಡಲಾಗಿದೆ. ಎಲ್ಲೆಡೆ ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯ ಸೌಕರ್ಯಗಳ ಬಗ್ಗೆಯೂ ಗಮನಹರಿಸಿದ್ದೇವೆ. ಸಖಿ ಮತಗಟ್ಟೆಗಳಿಗೆ ಬರುವ ಮತದಾರ ತಾಯಂದಿರ ಮಕ್ಕಳು ಕೆಲ ಕಾಲ ಆಟ ಆಡಲು ಅಲ್ಲಿ ಅಗತ್ಯ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದರಿಂದ ಅಲ್ಲಿ ಮತ ಹಾಕಲು ಬರುವ ಮಹಿಳೆಯರ ಸಂಖ್ಯೆ ಹೆಚ್ಚಲಿದೆ ಎಂದು ಹೇಳಿದರು.
ಹಾಗೆಯೇ ಗ್ರಾಮೀಣ ಭಾಗದಲ್ಲೂ ಸಾಕಷ್ಟು ಕಡೆ ಸಖಿ, ವಿಕಲಚೇತನ ಸ್ನೇಹಿ ಮತಗಟ್ಟೆಗಳನ್ನು ಮತ್ತು ಪಾರಂಪರಿಕ ಕಟ್ಟಡಗಳನ್ನು ಗುರ್ತಿಸಿ ಅಲ್ಲಿ ಪಾರಂಪರಿಕ ಮತಗಟ್ಟೆ ಕೇಂದ್ರಗಳನ್ನು ಮಾಡಿದ್ದೇವೆ. ಇದರಿಂದ ಮತದಾನದ ಪ್ರಮಾಣ ಹೆಚ್ಚಳವಾಗುವುದು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ. ಇ ಒ ಮುನಿರಾಜ, ನಗರಸಭೆ ಪೌರಾಯುಕ್ತ ಶ್ರೀಕಾಂತ್ , ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರಾಮ್ ಕುಮಾರ್, ಪಿಡಿಒ ಮಧು, ಆರೋಗ್ಯ ನಿರೀಕ್ಷಕ ಮುರಳಿ ಹಾಜರಿದ್ದರು.