ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಎಬಿಡಿ ಗ್ರೂಪ್ಸ್ ವತಿಯಿಂದ ಮನೆಮನೆಗೂ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಎಬಿಡಿ ಗ್ರೂಪ್ಸ್ ಅಧ್ಯಕ್ಷ ರಾಜೀವ್‌ಗೌಡ ಮಾತನಾಡಿದರು.
ಕೊರೊನಾ ಸಂಕಷ್ಟದಿಂದ ನಿರುದ್ಯೋಗಿಗಳಾಗಿರುವ ಯುವಕರಿಗೆ ಅವರವರ ಕೌಶಲ್ಯ ಹಾಗೂ ವಿದ್ಯಾರ್ಹತೆಗನುಗುಣವಾಗಿ ಉದ್ಯೋಗವನ್ನು ಎಬಿಡಿ ಗ್ರೂಪ್ಸ್ ಮೂಲಕ ಕೊಡಿಸಲಾಗುವುದು ಎಂದು ಅವರು ತಿಳಿಸಿದರು.
ಯಾರೂ ಸಹ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ತಾಲ್ಲೂಕಿನಾದ್ಯಂತ ಆಹಾರ ಧಾನ್ಯಗಳ ಕಿಟ್ ಗಳನ್ನು ಮನೆಮನೆಗೂ ವಿತರಿಸುವ ಯೋಜನೆಯನ್ನು ರೂಪಿಸಲಾಗಿದ್ದು, ಈಗಾಗಲೇ ಜಂಗಮಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಸಿ ಕಿಟ್ ವಿತರಣೆ ಸಮರ್ಪಕವಾಗಿ ನಡೆದಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರೆ ಕೊರೊನಾ ವಾರಿಯರ್ ಗಳಾಗಿ ಕೆಲಸ ಮಾಡುತ್ತಿರುವವರಿಗೂ ಸಹ ಪ್ರೋತ್ಸಾಹಕವಾಗಿ ದಿನಸಿ ಕಿಟ್ ನೀಡುತ್ತಿದ್ದೇವೆ ಎಂದು ಹೇಳಿದರು.
ಗಿಡಗಳನ್ನು ನೆಡುವುದು ಅವನ್ನು ಕಾಪಾಡುವುದು ನಮ್ಮೆಲ್ಲರ ಅಭ್ಯ್ಸವಾಗಬೇಕು. ಮುಂದಿನ ದಿನಗಳಲ್ಲಿ ಎಬಿಡಿ ಸಂಸ್ಥೆ ವತಿಯಿಂದ ಗಿಡಗಳನ್ನು ಸಹ ನೀಡುತ್ತೇವೆ. ಪ್ರತಿಯೊಬ್ಬರೂ ಕನಿಷ್ಠ ನಾಲ್ಕು ವರ್ಷಗಳ ಕಾಲ ಒಂದು ಗಿಡವನ್ನು ಕಾಪಾಡಿಕೊಂಡಲ್ಲಿ ಮುಂದೆ ಅದೇ ನಮಗೆಲ್ಲಾ ಉತ್ತಮ ಆಮ್ಲಜನಕ ನೀಡುತ್ತದೆ. ಪಶು ಪಕ್ಷಿಗಳಿಗೆ ಆಹಾರ ಒದಗಿಸುತ್ತದೆ. ಹಸಿರನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಜನರು ಕಷ್ಟದಲ್ಲಿರುವಾಗ ಅವರಿಗೆ ಎಬಿಡಿ ಸಂಸ್ಥೆ ವತಿಯಿಂದ ನೆರವು ನೀಡುತ್ತಿರುವುದು ಶ್ಲಾಘನೀಯ. ದೇಶವನ್ನು ಕೊರೊನಾ ಮುಕ್ತಗೊಳಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ಜನತೆ ಅನಾವಶ್ಯಕವಾಗಿ ಓಡಾಡದೇ ಸಹಕಾರ ನೀಡಬೇಕು. ಇನ್ನು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲರಿಗೂ ತಮ್ಮ ಕೈಲಾದ ಸಹಾಯ ಹಸ್ತ ಚಾಚುತ್ತಿರುವ ಸಮಾಜ ಸೇವಕರ ಕಾರ್ಯ ಅನುಕರಣೀಯ. ಜನತೆಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಚಿತ್ರ ನಟ ಧನುಶ್, ಕೃಷ್ಣ, ಸುರೇಶ್, ಮಂಜುನಾಥ್, ಆಂಜಿನಯರೆಡ್ಡಿ, ಜಗದೀಶ್, ನಾರಾಯಣಸ್ವಾಮಿ, ಹರೀಶ್, ಮುನಿರಾಜ್(ಕುಟ್ಟಿ) ಚಂದ್ರಶೇಖರ್, ಸಂದೀಪ್, ದಿಲೀಪ್ ಹಾಜರಿದ್ದರು.