ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿ ಕೆರೆಯಿಂದ ನಗರದ ಹೊರವಲಯದ ಅಮ್ಮನಕೆರೆಗೆ ಎಚ್.ಎನ್.ವ್ಯಾಲಿಯ ಕೃಷಿ ಆಧರಿತ ನೀರನ್ನು ಹರಿಸಲು ತೂಬನ್ನು ತೆರೆದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
ಬಯಲು ಸೀಮೆಯ ಈ ಭಾಗಗಳಿಗೆ ಪಶ್ಚಿಮ ಘಟ್ಟಗಳಿಂದ ಯಾವ ಜಲಮೂಲವನ್ನು ತರಬೇಕೆಂದು ನಮ್ಮ ಹೋರಾಟವಿತ್ತೋ ಅದು ಸಂಪೂರ್ಣ ಯಶಸ್ವಿ ಆಗಿಲ್ಲ. ಅದಕ್ಕಾಗಿ ಇದೀಗ ಎಚ್.ಎನ್ ವ್ಯಾಲಿ ನೀರು ಹರಿದುಬರುತ್ತಿರುವುದಕ್ಕೆ ಸಂತಸ ಅಥವಾ ಸಂಭ್ರಮ ಪಡುವ ಮನಸ್ಥಿತಿಯಲ್ಲಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ತಿಳಿಸಿದರು.
ಎತ್ತಿನಹೊಳೆ ಯೋಜನೆ ನಿಗದಿತ ಕಾಲಮಿತಿಯಲ್ಲಿ ನಡೆಯದಾದಾಗ, ಬೆಂಗಳೂರು ನಗರದಲ್ಲಿ ಬಳಕೆ ಮಾಡುವ 12 ಟಿ.ಎಂ.ಸಿ ನೀರನ್ನು ತಮಿಳುನಾಡಿಗೆ ಹರಿಯಬಿಡದೆ, ಅದನ್ನು ಶುದ್ಧೀಕರಿಸಿ ನಮ್ಮ ಕೆರೆಗಳಿಗೆ ಭರ್ತಿ ಮಾಡುವಂತೆ ನಾವು ಸರ್ಕಾರಕ್ಕೆ ವಿನಂತಿಸಿದ್ದೆವು. ಅಂತರ್ಜಲ ವೃದ್ಧಿ, ಕೃಷಿಗೆ ಉಪಯೋಗವಗಲೆಂದು ಎಚ್.ಎನ್ ವ್ಯಾಲಿ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದೆವು. ನಮ್ಮ ಹೋರಾಟಗಾರರ ಪ್ರತಿಫಲದಿಂದ ಈ ಭಾಗಕ್ಕೆ ಈ ನೀರು ಹರಿದುಬಂದಿದೆ. ಮೊದಲನೇ ಹಂತದ ನಮ್ಮ ಹೋರಾಟ ಸಫಲವಾಗಿದೆ. ಇನ್ನು ಪಶ್ಚಿಮಘಟ್ಟದಿಂದ ನೀರು ಸಮೃದ್ಧಿಯಾಗಿ ಈ ಭಾಗವನ್ನು ತಲುಪಬೇಕು. ಅದಕ್ಕಾಗಿ ಎರಡನೇ ಹಂತದ ಹೋರಾಟವನ್ನು ಪ್ರಾರಂಭಿಸಲಿದ್ದೇವೆ ಎಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಜಿಲ್ಲೆಯಲ್ಲಿನ 1800 ಕೆರೆಗಳಿಗೂ ನೀರು ತುಂಬುವ ಪ್ರಯತ್ನದಲ್ಲಿ ನಿರತರಾಗಿದ್ದೇವೆ. ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕುಗಳ 54 ಕೆರೆಗಳಿಗೆ ನೀರು ತುಂಬಿಸುವ ಎಚ್.ಎನ್.ವ್ಯಾಲಿಯ ಎರಡನೇ ಹಂತದ 90 ಕೋಟಿ ರೂಗಳ ಯೋಜನೆ ಸರ್ಕಾರದ ಹಂತದಲ್ಲಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ತಾಲ್ಲೂಕು ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ಕೆರೆಗಳಿಗೆ ನೀರು ಬರುತ್ತಿರುವುದು ಸಂತಸದ ಸಂಗತಿ. ಇದರಿಂದ ಅಂತರ್ಜಲ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.
ರೈತಸಂಘದ ಸದಸ್ಯರು ಬೈಕ್ ರ್ಯಾಲಿ ಮೂಲಕ ನಗರದಿಂದ ಗುಡಿಹಳ್ಳಿಗೆ ತೆರಳಿದರು.ಗುಡಿಹಳ್ಳಿ ಹಾಗೂ ಅಬ್ಲೂಡಿನ ಗ್ರಾಮಸ್ಥರು ಅದರಲ್ಲೂ ಮಹಿಳೆಯರು ದೀಪಗಳನ್ನು ಹೊತ್ತು ತಂದು ಉತ್ಸವ ನಡೆಸಿ ಗಂಗಮ್ಮನ ಪೂಜೆ ಮಾಡಿದರು. ಕೆರೆಯ ಸುತ್ತ ಹಬ್ಬದ ಆಚರಣೆಯ ವಾತಾವರಣ ನಿರ್ಮಾಣವಾಗಿತ್ತು.
ತಹಶೀಲ್ದಾರ್ ರಾಜೀವ್, ರೈತ ಸಂಘದ ಜಿಲ್ಲಾಧ್ಯಕ್ಷ ರಾಮನಾಥ್, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಗುಡಿಹಳ್ಳಿ ವೆಂಕಟಸ್ವಾಮಿ, ಕಿಶೋರ್, ವೇಣುಗೋಪಾಲ್, ರಮೇಶ್, ಬೀರಪ್ಪ, ರಾಮಚಂದ್ರಪ್ಪ, ಅಶ್ವತ್ಥನಾರಾಯಣ್, ಕೃಷ್ಣಪ್ಪ, ರಾಮಕೃಷ್ಣಪ್ಪ, ಬೈರಸಂದ್ರ ಮೂರ್ತಿ, ದೇವರಾಜ್, ಸುಬ್ರಮಣಿ, ನಾರಾಯಣಸ್ವಾಮಿ, ಮಂಜುನಾಥ್, ದೇವರಾಜ್ ಹಾಜರಿದ್ದರು.