Sidlaghatta : ಈ ಜಗತ್ತಿನಲ್ಲಿನ ಎಲ್ಲರಿಗೂ ಒಂದೊಂದು ಕೆಲಸ ಎಂಬುದಿರುತ್ತದೆ. ಕೆಲಸದಲ್ಲಿ ಮೇಲು ಕೀಳು ಎಂಬುದಿಲ್ಲ. ಅದು ಓದುವುದಾಗಲಿ, ವಕೀಲಿಕೆಯಾಗಲಿ, ಡ್ರೈವಿಂಗ್ ಆಗಲಿ, ಫೋಟೋಗ್ರಫಿಯಾಗಲಿ ಮಾಡುವ ಕೆಲಸವನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಕೌಶಲ್ಯದಿಂದ ಮಾಡಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ತಿಳಿಸಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಶಿಡ್ಲಘಟ್ಟ ವಕೀಲರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿಗೆ ವಿಶೇಷ ಅಭಿನಂದನೆ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನಾವು ಕೌಶಲ್ಯದಿಂದ ಮಾಡುವ ಕೆಲಸದಿಂದ ಇತರರಿಗೆ, ಸಮಾಜಕ್ಕೆ ಒಳ್ಳೆಯದಾಗುತ್ತದೆ. ಅನುಕೂಲವೂ ಆಗಲಿದೆ. ತೃಪ್ತಿಯೂ ಸಿಗುತ್ತದೆ. ನಿಮಗೆ ಅದಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಈ ಯುಕ್ತಿಯು ತುಂಬಾ ಹಳೆಯದಾದ ಸನಾತನವಾದದ್ದು ಅದನ್ನು ಅರಿತು ನಾವು ನಡೆದುಕೊಳ್ಳಬೇಕೆಂದರು.
ನನಗೆ ನೀವು ನೀಡಿದ ಅಭಿನಂದನೆಯು ವಯುಕ್ತಿಕವಾದುದಲ್ಲ ಎಂಬ ಪರಿಕಲ್ಪನೆ ನಮ್ಮಲ್ಲಿದ್ದರೆ ನಮ್ಮ ಕೆಲಸವನ್ನು ನಾವು ಸುಗಮವಾಗಿ, ನಿಷ್ಠೆಯಿಂದ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ನ್ಯಾಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಅನಾವರಣಗೊಳಿಸಿದ್ದೇವೆ. ವಿವೇಕಾನಂದರು ಬೋದಿಸಿದ ಅನೇಕ ಸನ್ಮಾರ್ಗಗಳನ್ನು ನಾವು ತಿಳಿದು ಅದರಂತೆ ಬಾಳಬೇಕು, ವಿವೇಕಾನಂದರು ಜಗತ್ತಿನ ಧರ್ಮದ ಚುಕ್ಕಾಣಿ ಹಿಡಿದಂತ ಮೇಧಾವಿ, ಸನ್ಯಾಸಿಗಳು ಆಗಿದ್ದರು ಎಂದರು. ವಿವೇಕಾನಂದರ ತತ್ವ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ನಾವು ಬದುಕಿ ಬಾಳಿದರೆ ನಮ್ಮೆಲ್ಲರ ಬದುಕು ಉತ್ತಮಗೊಳ್ಳುತ್ತದೆ. ಸಮಾಜವೂ ಉತ್ತಮಗೊಳ್ಳುತ್ತದೆ ಎಂದು ನುಡಿದರು.
ನನ್ನ ವೃತ್ತಿ ಜೀವನದಲ್ಲಿ ಇರುವ ಉಳಿದ ದಿನಗಳಲ್ಲಿ ಉತ್ತಮ ಕಾರ್ಯಗಳನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ, ಈ ಬಗ್ಗೆ ನನ್ನ ಸಹಪಾಠಿಗಳೊಂದಿಗೆ ಚರ್ಚಿಸಿದ್ದು ಎಲ್ಲರ ಸಲಹೆ ಸೂಚನೆಗಳೊಂದಿಗೆ ಕಾನೂನಿನ ಇತಿಮಿತಿಯಲ್ಲಿ ನಾನು ಕಾರ್ಯನಿರ್ವಹಿಸುತ್ತೇನೆಂದರು.
ಶಿಡ್ಲಘಟ್ಟ ವಕೀಲರ ಸಂಘದಿಂದ ನ್ಯಾ,ಪಿ.ಎಸ್.ದಿನೇಶ್‌ಕುಮಾರ್ ಅವರನ್ನು ಮೈಸೂರು ಪೇಟ ತೊಡಿಸಿ ಹೂವಿನ ಗುಚ್ಚ ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳ ವಕೀಲರ ಸಂಘದ ಪದಾಕಾರಿಗಳು ನ್ಯಾಯಮೂರ್ತಿಗಳನ್ನು ಸನ್ಮಾನಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನ್ಯಾಯಾಲಯದಲ್ಲಿನ ವಕೀಲರ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಪಾಪಿರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಐ.ಅರುಣ್ ಕುಮಾರ್, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಎನ್.ವಿ.ಭವಾನಿ, ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ರಾಮಮೋಹನ್‌ರೆಡ್ಡಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಶಿಡ್ಲಘಟ್ಟ ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ವೇದಿಕೆಯಲ್ಲಿದ್ದರು.