ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಿರಸ್ತೇದಾರ್ ಕೆ.ಎನ್.ಮಂಜುನಾಥ್ ಮಾತನಾಡಿದರು.
ಸಿರಿ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನಧರ್ಮ ಮಾಡುವುದರ ಮೂಲಕ ದಾನಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಸಾರಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸುಮಾರು ೫೦೦ ವರ್ಷಗಳ ಹಿಂದೆ ಶ್ರೀಶೈಲದ ಸಮೀಪ ಶರಣೆಯಾಗಿ ಜೀವಿಸಿದ್ದವಳು. ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಪುರದ ರಾಮರೆಡ್ಡಿ- ಗೌರಮ್ಮ ದಂಪತಿಗಳಿಗೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದ ಮಗಳು ಹೇಮರೆಡ್ಡಿ ಮಲ್ಲಮ್ಮ. ಈಕೆ ಬಾಲ್ಯದಿಂದಲೂ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧ್ಯ ದೈವವೆಂದು ಪರಿಭಾವಿಸಿ, ಕಡೆಯಲ್ಲಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು. ಈಕೆಯ ಬಾಳು ಪವಿತ್ರ ಮೌಲ್ಯಗಳ, ಆದರ್ಶದ, ಅತ್ಯಮೂಲ್ಯ ಕಣಜವಾಗಿದೆ ಎಂದು ಹೇಳಿದರು.
ನಾಡಿಗೆ ಶಿವಶರಣರು ಹೇಗೆ ಬದುಕಬೇಕೆಂದು ತಿಳಿಸಿಕೊಟ್ಟಿದ್ದಾರೆ. ಅವರ ಬದುಕು, ಬರಹ ಶಾಶ್ವತವಾದುದು. ಅವರನ್ನು ಈಗಿನವರು ಮರೆಯಬಾರದು, ಅವರ ಆದರ್ಶಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅವರ ಜಯಂತ್ಯುತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ರಾಜಸ್ವ ನಿರೀಕ್ಷಕ ಪ್ರಶಾಂತ್, ಪ್ರಥಮ ದರ್ಜೆ ಸಹಾಯಕರಾದ ವಿ.ಎಂ.ಮಂಜುನಾಥ್, ರಾಮ್‌ಪ್ರಸಾದ್ ಹಾಜರಿದ್ದರು.