Bashettahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆರೋಗ್ಯವಂತ ಶಿಶು ಪ್ರದರ್ಶನ ಹಾಗೂ ಸಾಂಕ್ರಾಮಿಕ ರೋಗದ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ತಾಯಿ ಮತ್ತು ಗರ್ಭಿಣಿಯರು ಉತ್ತಮ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು. ಇದರಿಂದ ತಾಯಿ, ಮಗುವಿನ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದರು.
ಗರ್ಭಿಣಿಯರು ಆರೋಗ್ಯದ ಕಡೆಗೆ ಆದ್ಯತೆ ನೀಡುವುದು, ಪೌಷ್ಟಿಕ ಆಹಾರ ಸೇವನೆ ಮುಂತಾದೆಡೆ ಹೆಚ್ಚಿನ ಕಾಳಜಿಯನ್ನು ಹೊಂದಿದರೆ ಆರೋಗ್ಯವಂತ ಶಿಶು ಜನಿಸುತ್ತದೆ. ಇದರಿಂದ ತಾಯಿ ಮತ್ತು ಶಿಶು ಮರಣ ತಪ್ಪಿಸಲು ಸಾಧ್ಯ ಎಂದು ವಿವರಿಸಿದರು.
ಪ್ರತಿ ಕುಟುಂಬ ಮಗುವಿನ ಅಂತರವನ್ನು ಕಾಪಾಡಿಕೊಳ್ಳಬೇಕು. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ 3 ವರ್ಷ ಅಂತರವನ್ನು ಕಾಪಾಡಿಕೊಂಡರೆ ತಾಯಿ ಹಾಗೂ ಮಕ್ಕಳ ಆರೋಗ್ಯವು ಉತ್ತಮಗೊಳ್ಳುತ್ತದೆ . ಪೋಷಕರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆಯಲ್ಲಿ 18 ವರ್ಷ ಪೂರೈಸಿದ ನಂತರ ವಿವಾಹ ಮಾಡಬೇಕು. ಇದರಿಂದ ಮುಂದೆ ಆಕೆ ಆರೋಗ್ಯದ ಬಗ್ಗೆ ಅರಿವುಹೊಂದಿ ಪ್ರಬುದ್ಧತೆ ಹೊಂದಲು ಸಾಧ್ಯ ಎಂದು ಮಾಹಿತಿ ನೀಡಿದರು.
ಸಾಂಕ್ರಾಮಿಕ ಕಾಯಿಲೆ ಹರಡುವಿಕೆ, ಇದರ ನಿಯಂತ್ರಣದ ಬಗ್ಗೆ ಮುಂಜಾಗ್ರತೆವಹಿಸುವ ಬಗ್ಗೆ, ಮಗುವಿಕೆ ಕೊಡಿಸಬೇಕಾದ ಲಸಿಕೆಗಳ ವಿವರ ಮತ್ತು ಅಗತ್ಯತೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಸುಷ್ಮಿತಾ, ವೈದ್ಯೆ ಡಾ.ಸುಷ್ಮಾ, ಆರೋಗ್ಯ ಇಲಾಖೆಯ ಮುನಿರತ್ನಮ್ಮ, ನಂದಿನಿ, ಸಮೀರಾ, ಗಾಯಿತ್ರಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.