Dibburahalli, Sidlaghatta : ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಆರೋಗ್ಯ ಅಮೃತ ಅಭಿಯಾನದಡಿ ಸ್ಥಳದಲ್ಲೆ ಆರೋಗ್ಯ ತಪಾಸಣೆ ನಡೆಸಿ ಔಷದೋಪಚಾರ ಮಾಡಲಾಯಿತು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಯ್ಯಪ್ಪನಹಳ್ಳಿ ಬಳಿ ಕಾಲುವೆ ಅಭಿವೃದ್ದಿ ಕಾಮಗಾರಿ ಹಾಗೂ ವೆಂಕಟಕೃಷ್ಣಮನಹಳ್ಳಿ ಗ್ರಾಮದಲ್ಲಿ ಗೋಕುಂಟೆ ಅಭಿವೃದ್ದಿ ಕಾಮಗಾರಿಯಲ್ಲಿ ಕೆಲಸ ಮಾಡುವ ನರೇಗಾ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜು, ಗ್ರಾಮ ಪಂಚಾಯತಿಯ ಆರೋಗ್ಯ ಅಮೃತ ಅಭಿಯಾನದಡಿ ಇದೆ ಮೇ 22 ರಿಂದ ಜೂನ್ 22 ರವರೆಗೆ ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವ ಅಭಿಯಾನ ನಡೆಯುತ್ತಿದೆ.
ಪ್ರತಿಯೊಬ್ಬ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು, ನಿಯಮಿತವಾಗಿ ನಿಮ್ಮ ಅರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದರಿಂದ ನೀವಷ್ಟೆ ಅಲ್ಲ ನಿಮ್ಮ ಮೇಲೆ ಅವಲಂಬಿತ ಕುಟುಂಬದ ಭವಿಷ್ಯವೂ ಚೆನ್ನಾಗಿರುತ್ತದೆ ಎಂದು ಹೇಳಿದರು.
ಬೈಯಪ್ಪನಹಳ್ಳಿ ಮತ್ತು ವೆಂಕಟಕೃಷ್ಣಮ್ಮನಹಳ್ಳಿ ಗ್ರಾಮದ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ ಗ್ರಾಮ ಆರೋಗ್ಯ ಕಾರ್ಯಕ್ರಮದಲ್ಲಿ 60 ಜನರಿಗೆ ಬಿಪಿ, ಶುಗರ್, ಟಿಬಿ, ಅನಿಮಿಯಾ ಇನ್ನಿತರೆ ಸಣ್ಣ ಪುಟ್ಟ ಕಾಯಿಲೆಗಳ ತಪಾಸಣೆ ಮಾಡಲಾಯಿತು.
ಹಾಗೆಯೆ ನರೇಗಾ ಕೆಲಸದ ಬಗ್ಗೆ ಹಾಗೂ ವೈಯುಕ್ತಿಕ ಹಾಗೂ ಸಮುದಾಯದ ಕಾಮಗಾರಿಗಳ ಬಗ್ಗೆ ಕೂಲಿ ಕಾರ್ಮಿಕರಿಗೆ ಸಮಗ್ರವಾಗಿ ಮಾಹಿತಿಯನ್ನು ತಿಳಿಸಲಾಯಿತು.
ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು, ಆರೋಗ್ಯ ಅಭಿಯಾನದ ತಾಲ್ಲೂಕು ಸಂಯೋಜಕರು, ತಾಲ್ಲೂಕು ನರೇಗಾ ಸಂಯೋಜಕ ಲೋಕೇಶ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಕೂಲಿ ಕಾರ್ಮಿಕರು ಹಾಜರಿದ್ದರು.