ಶಿಡ್ಲಘಟ್ಟ ನಗರದ ಹೊರವಲಯದ ಹನುಮಂತಪುರ ಗ್ರಾಮದಲ್ಲಿ 8 ಕುರಿಗಳು ಸೋಮವಾರ ರಾತ್ರಿ ಯಾವುದೋ ಪ್ರಾಣಿಯ ಧಾಳಿಯಿಂದ ಮೃತಪಟ್ಟಿದ್ದು, ತೋಳವಿರಬಹುದು ಎಂದು ಕುರಿಗಳ ಮಾಲೀಕ ಹನುಮಂತಪುರದ ರಾಜು ಅಂದಾಜಿಸಿದ್ದಾರೆ.
ಆದರೆ ನಮ್ಮ ಭಾಗದಲ್ಲಿ ತೋಳಗಳು ಇಲ್ಲ. ಬಿಜಿಎಸ್ ವಿದ್ಯಾಸಂಸ್ಥೆಯ ಹತ್ತಿರದ ನೀಲಗಿರಿ ತೋಪಿನಲ್ಲಿ ಕಸಾಯಿಖಾನೆಯ ತ್ಯಾಜ್ಯಗಳನ್ನು ಸುರಿಯಲಾಗುತ್ತದೆ. ಅವನ್ನು ತಿಂದುಕೊಂಡು ಹಲವು ನಾಯಿಗಳು ಚೆನ್ನಾಗಿ ಬಲಿತುಕೊಂಡಿವೆ. ಅವುಗಳು ಬಹುಶಃ ಬಂದು ಧಾಳಿ ನಡೆಸಿರಬಹುದೆಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಿದ್ದಾರೆ.
ಸ್ಥಳಕ್ಕೆ ಕಸಬಾ ರಾಜಸ್ವ ನಿರೀಕ್ಷಕ ಪ್ರಶಾಂತ್, ಗ್ರಾಮಲೆಕ್ಕಿಗ ನಾಗರಾಜ್, ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.