ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ವಿಶೇಷವಾಗಿ ಆಚರಿಸಲಾಯಿತು. ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯ ಕಲ್ಯಾಣೋತ್ಸವ ಹಾಗೂ 31ನೇ ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಕ್ತಿಗೀತೆ, ಭಾವಗೀತೆ, ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಶನಿವಾರ ರಾತ್ರಿ ಗ್ರಾಮದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು. ಹೂವಿನ ಪಲ್ಲಕ್ಕಿಯ ಉತ್ಸವಕ್ಕೆ ನೂರಾರು ಮಂದಿ ಸಾಕ್ಷಿಯಾದರು. ದೇವಾಲಯ ಹಾಗೂ ಗ್ರಾಮದ ಪ್ರಮುಖ ರಸ್ತೆಗಳನ್ನೆಲ್ಲಾ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹನುಮಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಮೂಡಿದ್ದು, ಭಕ್ತರು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ನಾಗಮಂಗಲ ಗ್ರಾಮದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯದಲ್ಲಿ 15ನೇ ವರ್ಷದ ಹನುಮಜಯಂತಿಯನ್ನು ಆಚರಿಸಲಾಯಿತು. ಚೋಳರ ಕಾಲದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯ ತಾಲ್ಲೂಕಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಶಿಥಿಲಗೊಂಡಿದ್ದ ದೇವಾಲಯವನ್ನು ಗ್ರಾಮಸ್ಥರು ನವೀಕರಿಸಿದ ನಂತರ ಪ್ರತಿ ವರ್ಷವೂ ಹನುಮ ಜಯಂತಿ ವಿಶೇಷವಾಗಿ ಒಗ್ಗಟ್ಟಿನಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ವಿವಿಧೆಡೆ ಹನುಮ ಜಯಂತಿ: ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ, ಅಪ್ಪೇಗೌಡನಹಳ್ಳಿ ಗೇಟ್ ಬಯಲಾಂಜನೇಯಸ್ವಾಮಿ ದೇವಾಲಯ, ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ, ಮಯೂರ ವೃತ್ತದ ಆಂಜನೇಯಸ್ವಾಮಿ, ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇಗುಲ, ಮುತ್ತೂರು ಗ್ರಾಮ, ಎಚ್.ಕ್ರಾಸ್, ಚೊಕ್ಕಂಡಹಳ್ಳಿ, ಎದ್ದಲತಿಪ್ಪೇನಹಳ್ಳಿ ಮುಂತಾದೆಡೆ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.