Sidlaghatta : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಿಡ್ಲಘಟ್ಟದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಭೇಟಿ ಆಗಿರುವುದು ಶಿಡ್ಲಘಟ್ಟ ಕ್ಷೇತ್ರದ ರಾಜಕಾರಣದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.
ರಾಮಚಂದ್ರಗೌಡ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ಸಂಬಂಧಿಯೂ ಆಗಿದ್ದಾರೆ. ದೇವೇಗೌಡ ಅವರ ಮೊಮ್ಮಗಳ ನಾಮಕರಣವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ನಡೆಯಿತು. ಈ ವೇಳೆ ಉಭಯ ನಾಯಕರು ಭೇಟಿ ಆಗಿದ್ದಾರೆ. ಈ ವೇಳೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಗೌಡರ ಆಪ್ತಮೂಲಗಳು ತಿಳಿಸಿವೆ.
ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಶಿಡ್ಲಘಟ್ಟದಲ್ಲಿ ಜೆಡಿಎಸ್ನ ಬಿ.ಎನ್.ರವಿಕುಮಾರ್ ಶಾಸಕರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪುಟ್ಟು ಆಂಜಿನಪ್ಪ, ಕಾಂಗ್ರೆಸ್ನ ರಾಜೀವ್ಗೌಡ ನಂತರ ಬಿಜೆಪಿಯ ಅಭ್ಯರ್ಥಿಯಾಗಿದ್ದ ಸೀಕಲ್ ರಾಮಚಂದ್ರಗೌಡ ಅವರು ತೃತೀಯ ಸ್ಥಾನಗಳಿಸಿದ್ದರು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವು ಭದ್ರವಾಗಿ ಬೇರೂರಿವೆ. ಬಿಜೆಪಿಯು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿತ್ತು. ಕಡಿಮೆ ಅವಧಿಯಲ್ಲಿ ಕ್ಷೇತ್ರಕ್ಕೆ ಬಂದ ರಾಮಚಂದ್ರಗೌಡ ದೊಡ್ಡ ಮಟ್ಟದಲ್ಲಿಯೇ ಹೆಸರು ಸಹ ಮಾಡಿದ್ದಾರೆ. ಗೌಡರು ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ್ಷೇತ್ರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಸಹ ಚಾಲ್ತಿಯಲ್ಲಿವೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆ ನಡೆಸಲಿವೆ. ಇಂತಹ ಸಮಯದಲ್ಲಿ ರಾಮಚಂದ್ರ ಗೌಡ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ.
‘ಖಾಸಗಿ ಕಾರ್ಯಕ್ರಮದಲ್ಲಿ ಭೇಟಿ ಆಗಿದ್ದಾರೆ. ಈ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಶಿಡ್ಲಘಟ್ಟ ಕ್ಷೇತ್ರದ ರಾಜಕೀಯದ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿವೆ. ಲೋಕಸಭೆ ಚುನಾವಣೆಯ ಬಗ್ಗೆಯೂ ಮಾತನಾಡಿದ್ದಾರೆ’ ಎನ್ನುತ್ತಾರೆ ರಾಮಚಂದ್ರಗೌಡ ಅವರ ಆಪ್ತರು.