ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನದಿ, ನಾಲೆ, ಹಳ್ಳ, ಕೊಳ್ಳ ಸೇರಿದಂತೆ ಶಾಶ್ವತ ನೀರಿನ ಮೂಲಗಳು ಇಲ್ಲದಿದ್ದರೂ, ಇಲ್ಲಿಯ ರೈತರು ಸಾವಿರ ಅಡಿ ಆಳದಿಂದ ನೀರು ತಂದು ದ್ರಾಕ್ಷಿ ಬೆಳೆಯುತ್ತಾರೆ. ಈ ಭಾರಿ ಉತ್ತಮ ಫಸಲು ಬಂದಿದೆ. ಒಂದೆಡೆ ಬೆಲೆ ಕುಸಿತವಾಗಿದ್ದರೆ, ಮತ್ತೊಂದೆಡೆ ಅದನ್ನು ಕೊಳ್ಳುವವರು ಬರದೇ ರೈತರು ತಾವು ಬೆಳೆದ ದ್ರಾಕ್ಷಿಯನ್ನು ಕಟಾವು ಮಾಡಿ ತಿಪ್ಪೆಗೆ ಸುರಿಯುವಂಥ ಪರಿಸ್ಥಿತಿಗೆ ಸಿಲುಕಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು 1,200 ಹೆಕ್ಟೆರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಬೆಂಗಳೂರು ಬ್ಲೂ 550 ಹೆಕ್ಟೇರ್ ಪ್ರದೇಶದಲ್ಲಿ, ದಿಲ್ ಖುಷ್ 400 ಹೆಕ್ಟೇರ್ ಪ್ರದೇಶದಲ್ಲಿ ಮತ್ತು ರೆಡ್ ಗ್ಲೋಬ್, ಶರ್ತ್, ಕೃಷ್ಣಾ, ಸರಿತಕೃಷ್ಣ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಾರೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಮಾಹಿತಿ ನೀಡಿದರು.
ತಾಲ್ಲೂಕಿನ ಬುದ್ಧಿವಂತ ರೈತರು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ತುಂಬಾ ಜಾಣ್ಮೆಯಿಂದ ದ್ರಾಕ್ಷಿ ಬೆಳೆದು ನಾಲ್ಕು ಕಾಸು ಸಂಪಾದಿಸುವ ಆಸೆ ಹೊಂದಿದ್ದರು. ಆದರೆ, ಮಾರುಕಟ್ಟೆಯಲ್ಲಿನ ಬೆಲೆ ಕುಸಿತ ಬೆಳೆಗಾರನ ಆಸೆಗೆ ತಣ್ಣೀರು ಎರಚಿದೆ.
“ಬೆಂಗಳೂರು ಬ್ಲೂ ಒಂದು ಕೆಜಿಗೆ 20 ರೂ ಎನ್ನುತ್ತಿದ್ದಾರೆ. ಆದರೆ ತೋಟಕ್ಕೆ ಬಂದು ಕೊಯ್ಯುವವರಿಲ್ಲ, ಕೊಳ್ಳುವವರಿಲ್ಲ. ಬೇಡಿಕೆಯೇ ಇಲ್ಲವಾಗಿದೆ. ತೋಟಗಳಿಂದ ಹಣ್ಣು ಹೊರಕ್ಕೆ ಹೋಗುತ್ತಿಲ್ಲ. ದಿಲ್ ಖುಷ್ 12 , 15 ರೂ ಎನ್ನುತ್ತಿದ್ದಾರೆ. ಅದನ್ನೂ ಶ ಕೊಳ್ಳುವವರಿಲ್ಲ. ಸೊನಾಕಾ ವರ್ಷದ ಬೆಳೆ. ಕನಿಷ್ಠ ಒಂದು ಕೆಜಿಗೆ 100 ರೂ ಇರಬೇಕಿತ್ತು. ಆದರೆ 30, 35 ರೂ ಎನುತ್ತಿದ್ದಾರೆ. ರೆಡ್ ಬ್ಲೂ ಕೂಡ ವರ್ಷದ ಬೆಳೆ. ಕನಿಷ್ಠ ಒಂದು ಕೆಜಿಗೆ 100 ರೂ ಇರಬೇಕಿತ್ತು. ಆದರೆ 60, 70 ಎನ್ನುತ್ತಿದ್ದಾರೆ. ಆದರೆ ಕೊಯ್ಯುವವರಿಲ್ಲ. ತೋಟಗಳಲ್ಲಿ ಹಾಗೆಯೇ ಉಳಿದಿವೆ ದ್ರಾಕ್ಷಿಗಳು” ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರ ಅಪ್ಪೇಗೌಡನಹಳ್ಳಿ ಶಿವಣ್ಣ
“ಅತ್ಯಂತ ಕಡಿಮೆ ನೀರಲ್ಲೂ ಹಣ್ಣು, ತರಕಾರಿಗಳ ಜತೆಗೆ ಉತ್ತಮ ಗುಣಮಟ್ಟದ ದ್ರಾಕ್ಷಿ ಬೆಳೆದು ಮಾದರಿಯಾಗಿದ್ದಾರೆ. ಆದರೆ, ಈ ರೈತರ ಬೆಳೆಗೆ ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸಕ್ಕೆ ಮಾತ್ರ ಮಾನ್ಯತೆ ಸಿಗದಿರುವುದು ವಿಪರ್ಯಾಸ. ದ್ರಾಕ್ಷಿ ಬೆಳೆ ಹವಾಮಾನ ಅವಲಂಬಿತ ಕೃಷಿ. ತೇವಾಂಶ ಇದ್ದರೆ ದ್ರಾಕ್ಷಿ ಬೇಗನೇ ಹಾಳಾಗುತ್ತದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಈ ಬೆಳೆಯ ನಿರ್ವಹಣೆಗಾಗಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣಾ ಘಟಕ ಆಗಬೇಕಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಚಿಂತನೆ ಮಾಡಬೇಕು” ಎಂದು ದ್ರಾಕ್ಷಿ ಬೆಳೆಗಾರ ತ್ಯಾಗರಾಜ್ ಒತ್ತಾಯಿಸಿದರು.