ತಾಲ್ಲೂಕಿನ ಮೇಲೂರು ಗ್ರಾಮದ ಒಂದನೇ ಡಿವಿಶನ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಎಂ.ಕೆ.ರವಿಪ್ರಸಾದ್ ಮತದಾರರಲ್ಲಿ ಮಳೆನೀರು ಕೊಯ್ಲಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
“ನಿಮ್ಮ ಮನೆಯ ಬಳಿ ಮೋರಿ ಸ್ವಚ್ಛವಾಗಿದೆಯಾ? ನಿಮ್ಮ ನಲ್ಲಿಯಲ್ಲಿ ನೀರು ಸಮರ್ಪಕವಾಗಿ ಬರುತ್ತಿದೆಯಾ? ಬೆಳಗಿನ ಜಾವ ನೀರು ಹಿಡಿಯುವುದು ತಪ್ಪಿದೆಯಾ? ಇಲ್ಲಾ ಎಂದಾದರೆ, ಅದನ್ನು ಸರಿಪಡಿಸುವುದು ಮುಖ್ಯವಲ್ಲವೇ” ಎಂದು ಅವರು ಮತದಾರರನ್ನೇ ಪ್ರಶ್ನಿಸುತ್ತಿದ್ದಾರೆ.
“ನೀರು ನಮ್ಮೆಲ್ಲರಿಗೂ ಅತೀ ಅವಶ್ಯ ಅದರಲ್ಲೂ ದನ ಕರು ಕುರಿ ಸಾಕಿ ಜೀವಿಸುತ್ತಿರುವವರಿಗೆ ಅತೀ ಅವಶ್ಯ, ಇದಕ್ಕೆ ಅಹರ್ನಿಶಿ ದುಡಿಯುತ್ತಿರುವ ಮೇಲೂರಿನ ಶ್ರೀನಿವಾಸ್ ಮೂರ್ತಿ(ಪುಲಿ) ಹಾಗೂ ಸಿಬ್ಬಂದಿ ಹಗಲು ರಾತ್ರಿಯೆನ್ನದೆ ಬೋರ್‌ವೆಲ್‌ಗಳನ್ನ ಚಾಲೂ ಮಾಡಿ ಟ್ಯಾಂಕ್‌ಗಳಿಗೆ ತುಂಬಿ ಗ್ರಾಮಕ್ಕೆ ನೀರು ಹರಿಸುತ್ತಿರುವುದು ಕಷ್ಟಕರವಾದ ಕೆಲಸ. ಗ್ರಾಮದ ಕೊಳವೆಬಾವಿಗಳಲ್ಲಿ ನೀರಿಲ್ಲದೇ ಎಲ್ಲಾ ಜನರಿಗೆ ನೀರು ತಲುದದೇ ಜನರ ಬೈಗುಳ ತಪ್ಪಿಲ್ಲ. ಇದಕ್ಕೆ ಇರುವುದೊಂದೇ ಪರಿಹಾರ, ಅದೇ “ಮಳೆಕೊಯ್ಲು”. ನನ್ನ ಮನೆಗೆ ನಾನೇ ಅಳವಡಿಸಿ ಕೊಂಡಿರುವ ಮಳೆಕೊಯ್ಲಿನಿಂದ ಐದರಿಂದ ಆರು ತಿಂಗಳು ನನಗೆ ಬೇರೆ ನೀರಿನ ಅವಶ್ಯಕತೆ ಇಲ್ಲ. ಈ ಪರ್ಯಾಯ ವ್ಯವಸ್ಥೆ ನಮಗೆ ಅತೀ ಜರೂರು ಬೇಕಿದೆ, ನಾನು ಈಗಾಗಲೇ 36ಕ್ಕೂ ಹೆಚ್ಚು ಕಡೆ ಈ ಮಳೆಕೊಯ್ಲು ಅಳವಡಿಸಿ ಯಶಸ್ವಿಯಾಗಿರುವೆ.
ಇನ್ನು ಮನೆಗಳಿಗೆ ಮಳೆ ಕೊಯ್ಲು ಮಾಡಿಸಿ ಕೊಂಡಿರುವವರ ಖುಷಿಯಂತೂ ಹೇಳತೀರದು. ಇದಕ್ಕೆ ಪರಿಕರಗಳನ್ನ ಮನೆಯ ಮಾಲೀಕರೇ ತಂದು ಕೊಡುತ್ತಾರೆ. ಅದರ ಅಂದಾಜು ವೆಚ್ಪ ಸುಮಾರು 6 ರಿಂದ 8 ಸಾವಿರ(ಇದಕ್ಕೂ ಪಂಚಾಯತಿಯಿಂದ ಸಹಾಯ ಧನ ಪಡೆಯಬಹುದು). ಇನ್ನು ಅಳವಡಿಕೆಗೆ ನಾನು ಪಡೆದ ಹಣವು ಮಾತ್ರ ಆ ಕೆಲಸದ ಸಮಯದಲ್ಲಿ ಅವರು ನೀಡುವ ತಿಂಡಿ ಕಾಫಿ ಅಷ್ಟೇ. ಈ ಕಾರ್ಯ ನಮ್ಮ ಊರಿನಲ್ಲೂ ನಡೆದು ನಿಮ್ಮಗಳ ಮನೆ ಬಾಗಿಲಿಗೆ ತಾಯಿ ಗಂಗಮ್ಮನ ಹರಿಸುವುದೇ ನನ್ನ ಮೊದಲ ಗುರಿ. ಅದೂ ನಿಮ್ಮ ಮನೆಯಂಗಳಕ್ಕೆ. ನೀವು ನೀರಿಗಾಗಿ ಸರದಿ ನಿಲ್ಲದೇ ರಾತ್ರಿ ಹಗಲು ಕಾಯದೇ, ನೀರನ್ನ ಸಂಗ್ರಹಿಸುವುದೇ ಒಂದು ಕೆಲಸವೆನ್ನದೇ, ನಿಮ್ಮ ಅಮೂಲ್ಯ ಸಮಯವನ್ನ ಉಳಿಸುವುದೇ ನನ್ನ ಗುರಿ. ಇದು ಸಾದ್ಯವಾಗದ ಕೆಲಸ ಸುಮ್ಮನೆ ಹೇಳುತ್ತಾನೆ ಎಂದಾದರೆ ನನ್ನ ದೂರವಾಣಿಗೆ ಕರೆ ಮಾಡಿ ಎಲ್ಲಾ ಮಳೆಕೊಯ್ಲು ಗ್ರಾಹಕರ ದೂರವಾಣಿ ಸಂಖ್ಯೆ ನೀಡುತ್ತೇನೆ ನೀವೇ ಕರೆ ಮಾಡಿ ತಿಳಿದುಕೊಳ್ಳಿ” ಎಂದು ತಿಳಿಹೇಳುತ್ತಿದ್ದಾರೆ ಎಂ.ಕೆ.ರವಿಪ್ರಸಾದ್.
“ನಿಮಗೇ ಯಾಕೆ ಮತ ನೀಡ ಬೇಕು ನಿಮ್ಮ ಅಭಿವೃದ್ಧಿ ರೂಪರೇಷಗಳೇನು?” ಎಂದು ಪ್ರತಿಯೊಬ್ಬ ಮತದಾರರೂ ಕೇಳಬೇಕು. ನನ್ನ ಮೊದಲ ಆದ್ಯತೆ ನೀರು ಅದನ್ನು ನಾನು ಕಾರ್ಯ ರೂಪಕ್ಕೆ ತರಲು ನಮಗೆ ಒಂದು ಅವಕಾಶ ನೀಡಿ ಎಂದು ಮತದಾರರನ್ನು ಕೇಳುತ್ತಿದ್ದೇನೆ ಎಂದು ಅವರು ಹೇಳಿದರು.
ನಮ್ಮ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಾರಿ ಚುನಾವಣೆಗೆ ಹೆಚ್ಚಾಗಿ ಪ್ರಜ್ಞಾವಂತರು, ಯುವ ಮನಸ್ಸುಳ್ಳವರು ಸ್ಪರ್ಧಿಸಿದ್ದಾರೆ. ಅನುಭವಿಗಳ ಸಲಹೆಗಳೊಂದಿಗೆ ಸಾರ್ವಜನಿಕರಿಗೆ ಅಗತ್ಯವುಳ್ಳ ಹಲವು ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ್ದೇವೆ. ಹಂತಹಂತವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನುಡಿದರು.