ತಾಲ್ಲೂಕಿನಲ್ಲಿ ಡಿಸೆಂಬರ್ 22 ರಂದು ಗ್ರಾಮಪಂಚಾಯಿತಿ ಚುನಾವಣೆ ನಡೆಯಲಿದ್ದು ಸರ್ವ ಸಿದ್ಧತೆಗಳನ್ನು ಮಾಡಿದ್ದು, ಮಸ್ಟರಿಂಗ್ ಅಂದರೆ ಮತಗಟ್ಟೆಗಳಿಗೆ ಸಾಮಗ್ರಿಗಳನ್ನು ಹಾಗೂ ಸಿಬ್ಬಂದಿಯನ್ನು ಕಳುಹಿಸುವ ಕಾರ್ಯವನ್ನು ಸೋಮವಾರ ನಡೆಸುತ್ತಿರುವುದಾಗಿ ತಹಶೀಲ್ದಾರ್ ಅನಂತರಾಮ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಮತಗಟ್ಟೆಗಳಿಗೆ ಸಾಮಗ್ರಿಗಳನ್ನು ಹಾಗೂ ಸಿಬ್ಬಂದಿಯನ್ನು ಕಳುಹಿಸುವ ಕಾರ್ಯವನ್ನು ನಡೆಸಿ ಅವರು ಮಾತನಾಡಿದರು.
ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಸರ್ಕಾರ ನೇಮಕ ಮಾಡಿರುವ ಆರ್.ಒ ಮತ್ತು ಎ.ಆರ್.ಒ ಗಳು ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸ್ವೀಕರಣೆಯಿಂದ ಹಿಡಿದು ಮತ ಎಣಿಕೆ ಮುಗಿಯುವವರೆಗೆ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. 24 ಗ್ರಾಮ ಪಂಚಾಯಿತಿಗಳಿಂದ ಒಟ್ಟು 374 ಸದಸ್ಯರು ಆಯ್ಕೆ ಆಗಬೇಕಿದೆ. 177 ಮೂಲ ಮತಗಟ್ಟೆಗಳು ಮತ್ತು 27 ಹೆಚ್ಚುವರಿ ಮತಗಟ್ಟೆಗಳಿವೆ. ಆದರೆ ಏಳು ಮತಗಟ್ಟೆಗಳಲ್ಲಿ ಅವಿರೋಧವಾಗಿ ಆಯ್ಕೆ ನಡೆದಿರುವುದರಿಂದ 195 ಮತಗಟ್ಟೆಗಳಿಂದ ಚುನಾವಣೆಯನ್ನು ನಡೆಸಲಿದ್ದೇವೆ ಎಂದರು.
24 ಗ್ರಾಮ ಪಂಚಾಯಿತಿಗಳಿಂದ ಒಟ್ಟು 1,16,668 ಮತದಾರರಿದ್ದಾರೆ. 195 ಮತಗಟ್ಟೆಗಳಿಗೆ ಮಸ್ಟರಿಂಗ್ ಅಂದರೆ ಮತಗಟ್ಟೆಗಳಿಗೆ ಸಾಮಗ್ರಿಗಳನ್ನು ಹಾಗೂ ಸಿಬ್ಬಂದಿಯನ್ನು ಕಳುಹಿಸುವ ಕಾರ್ಯವನ್ನು ನಡೆಸಿದ್ದೇವೆ. ದಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದೆ. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ 195 ಮತಗಟ್ಟೆಗಳಲ್ಲಿ 30 ಸೂಕ್ಷ್ಮ, 20 ಅತಿಸೂಕ್ಷ್ಮ ಹಾಗೂ 152 ಸಾಮಾನ್ಯ ಎಂದು ಮತಗಟ್ಟೆಗಳನ್ನು ಗುರುತಿಸಿದ್ದೇವೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಿದ್ದೇವೆ. ಒಟ್ಟು 303 ಪೊಲೀಸ್ ಸಿಬ್ಬಂದಿಯನ್ನು ವಿವಿಧ ಮತಗಟ್ಟೆಗಳಿಗೆ ನಿಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.
ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಪ್ರತಿಯೊಂದು ಮತಗಟ್ಟೆಗೂ ನೇಮಕ ಮಾಡಿ ಅವರ ಮೂಲಕ ಥರ್ಮಲ್ ಸ್ಕಾನ್ ಮಾಡಿ, ತೊಂದರೆ ಕಂಡುಬಂದಲ್ಲಿ ಚಿಕಿತ್ಸೆ ಕೊಡಿಸಲು ಏರ್ಪಾಟು ಮಾಡಿದ್ದೇವೆ. 760 ಮತಗಟ್ಟೆ ಸಿಬ್ಬಂದಿ ಮತ್ತು 195 ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 955 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.