Gowdanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಂಕ್ರಾಂತಿ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.
ಶಾಲೆಯ ಹಿರಿಯ ಮಕ್ಕಳಿಂದ ತಮ್ಮ ಮನೆಗಳಲ್ಲಿರುವ ಅಪರೂಪದ ಹಳೆಯ ವಸ್ತುಗಳನ್ನು ತರಿಸಿ ಅವುಗಳನ್ನು ಪ್ರದರ್ಶಿಸಿ ಮಾಹಿತಿ ನೀಡಲಾಯಿತು. ಶಾಲಾ ಮೈದಾನವನ್ನು ಸಿಂಗಾರ ಮಾಡಲಾಗಿತ್ತು. ಧಾನ್ಯಗಳ ರಾಶಿ, ಅವರೇಕಾಯಿ, ಕಡಲೆಕಾಯಿ, ಗೆಣಸು, ಕಬ್ಬು, ಎಳ್ಳು ಬೆಲ್ಲ, ಇಟ್ಟು ಹಾಲು ಹುಕ್ಕಿಸಿ ಪೂಜಿಸಲಾಯಿತು. ಎತ್ತುಗಳನ್ನು ಅಲಂಕರಿಸಿ ಬೆಂಕಿಯ ಮೇಲೆ ಕಿಚ್ಚು ಹಾಯಿಸಲಾಯಿತು. ಮಕ್ಕಳು ಪಂಜುಗಳನ್ನು ತಿರುಗಿಸಿದರು. ಮಕ್ಕಳಿಗೆ ಸಿಹಿ ಊಟ ನೀಡಲಾಯಿತು. ಎಲ್ಲಾ ಶಾಲೆಯ ಮಕ್ಕಳು ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿ ಬಂದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಿ. ಆರ್. ಪಿ ಬಾಬು ಮಾತನಾಡಿ, ಸುಗ್ಗಿಯ ಕಾಲದಲ್ಲಿ ಕಣಗಳನ್ನು ಮಾಡುವುದು, ಧಾನ್ಯಗಳನ್ನು ಒಕ್ಕಣೆ ಮಾಡುವುದು , ರಾಶಿ ಪೂಜೆ ಇತ್ಯಾದಿ ಸಾಮಾನ್ಯವಾಗಿತ್ತು. ತಾಂತ್ರಿಕತೆ, ಆಧುನಿಕತೆಯಲ್ಲಿ ಅವುಗಳೆಲ್ಲ ಮಾಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಲೆಯ ಆವರಣದಲ್ಲಿ ನಡೆದ ಪ್ರದರ್ಶನದಲ್ಲಿ ಕೃಷಿ ಸಲಕರಣೆಗಳಾದ ಸನಿಕೆ, ಗುದ್ಲಿ, ಪಿಕಾಸಿ, ಆರೆ, ಗೊಡ್ಲಿ, ಗಡಾರಿ, ಕೈಗುದ್ಲಿ, ಗಡಾರಿ, ತಟ್ಟಿ ಬುಟ್ಟಿ, ಮೊಚ್ಚು, ಕುಡಗೋಲು, ರಂಪ, ಸೇರು, ಪಾವ್, ಶಾಟಕು, ಕೊಡಮೆ, ಶಾವಿಗೆ ಕೊಂತ, ಹೀಗೆ ನೂರಕ್ಕೂ ಹೆಚ್ಚು ವಸ್ತುಗಳ ಪರಿಚಯ ಮಾಡಲಾಯಿತು.
ಮುಖ್ಯ ಶಿಕ್ಷಕ ಎಂ.ದೇವರಾಜ, ಶಿಕ್ಷಕರಾದ ಎಚ್.ಬಿ.ಕೃಪಾ, ವಿ.ಎಂ.ಮಂಜುನಾಥ್, ಎಸ್.ಎ.ನಳಿನಾಕ್ಷಿ, ಡಿ.ದಿವ್ಯ, ಗೌತಮಿ, ವಿದ್ಯಾಶ್ರೀ, ಮುನಿರಾಜ್, ಹಳೇ ವಿದ್ಯಾರ್ಥಿಗಳ ಸಂಘದ ಚಂದ್ರು, ಮುನಿಕೃಷ್ಣಪ್ಪ, ಸಿಬ್ಬಂದಿ ಗಾಯತ್ರಿ, ಅಡುಗೆ ಸಿಬ್ಬಂದಿ ಯಶೋದ, ಗಾಯತ್ರಿ, ಶಾರದಮ್ಮ ಬೈರಕ್ಕ ಹಾಜರಿದ್ದರು.